ಸತೀಶ್‌ ಆಚಾರ್ಯರ ವಿರುದ್ಧ ಕೇಸರಿ ಟ್ರೋಲ್ ಗಳ ದಾಳಿ: ಖ್ಯಾತ ಕಾರ್ಟೂನಿಸ್ಟ್ ಬೆಂಬಲಕ್ಕೆ ನಿಂತ ನೆಟ್ಟಿಗರು

Update: 2021-05-01 16:10 GMT

ಖ್ಯಾತ ವ್ಯಂಗ್ಯ ಚಿತ್ರಕಾರ, ಸರಕಾರ- ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ತನ್ನ ಕಾರ್ಟೂನ್ ಗಳ ಮೂಲಕ ತೀಕ್ಷ್ಣವಾಗಿ ಟೀಕಿಸುತ್ತಲೇ ಬಂದಿರುವ ಸತೀಶ್‌ ಆಚಾರ್ಯ ಅವರು ಇದೀಗ ಕೊರೋನ ಲಸಿಕೆಗೆ ಸಂಬಂಧಿಸಿದಂತೆ ರಚಿಸಿರುವ ಕಾರ್ಟೂನ್ ಗಳಿಂದಾಗಿ ಕೇಸರಿ ಟ್ರೋಲ್ ಗಳು, ಬಲಪಂಥೀಯರ ಟೀಕೆ ಮತ್ತು ಜಾತಿ ನಿಂದನೆಗೆ ಒಳಗಾಗಿದ್ದು, ಇದರ ಬೆನ್ನಲ್ಲೇ ಹಲವರು ಸತೀಶ್‌ ಆಚಾರ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸತೀಶ್‌ ಆಚಾರ್ಯ ಅವರು ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ- ರಾಜ್ಯ ಸರಕಾರದ ವೈಫಲ್ಯ, ಕೊರೋನ ಲಸಿಕೆಯ ಬಗ್ಗೆ ಹಲವು ಕಾರ್ಟೂನ್ ಗಳನ್ನು ರಚಿಸಿದ್ದಾರೆ. ಕಾರ್ಟೂನ್ ಗಳ ಮೂಲಕ ಅವರು, ಲಸಿಕೆಯನ್ನು ಆಡಳಿತ ಪಕ್ಷಗಳು ಹೇಗೆ ತಮ್ಮ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಮತ್ತು ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಇದನ್ನೇ ಗುರಿಯಾಗಿಸಿದ ಕೇಸರಿ ಟ್ರೋಲ್ ಗಳು ಸತೀಶ್‌ ಆಚಾರ್ಯ ಅವರನ್ನು ಕಟು ಶಬ್ದಗಳಿಂದ ಅವಾಚ್ಯವಾಗಿ ನಿಂದಿಸಿದ್ದಾರೆ.

ಇದರ ಜೊತೆಗೆ, ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ನ ನಿರೂಪಕ ಅಜಿತ್ ಹನುಮಕ್ಕನವರ್‌ ಟಿವಿ ಕಾರ್ಯಕ್ರಮವೊಂದರಲ್ಲಿ ಸತೀಶ್‌ ಆಚಾರ್ಯ ಅವರನ್ನು ಟೀಕಿಸಿ, 'ಲಸಿಕೆಯಲ್ಲಿ ಯಾವ ರಾಜಕೀಯ ಇದೆ. ಇಷ್ಟೆಲ್ಲಾ ಅಪಪ್ರಚಾರ ಮಾಡಿ ಈಗ ನೀವೇ ಲಸಿಕೆ ಹಾಕಿಕೊಂಡಿದ್ದೀರಲ್ವಾ. ಹಾಳು ಬಾವಿನೋ ಕೆರೆನೋ ನೋಡಿಕೊಳ್ಳಿ. ನಿಮ್ಮ ರಾಜಕೀಯ ಐಡಿಯಾಲಜಿ ಮನೆಯಲ್ಲಿ ಬಿಟ್ಟು ಬನ್ನಿ' ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ಫೇಸ್ಬುಕ್ ನಲ್ಲಿ ಜಯರಾಜ ಸಿ.ಎಂ. ಎಂಬವರು ಕಮೆಂಟ್ ಮಾಡಿ 'ಹುಟ್ಟಿನಿಂದ ಅವನು ಆಚಾರ್ಯನಾಗಿರಬಹುದು. ಆದರೆ ಅವನು ಶೂದ್ರನಿಗಿಂತ ಕೆಟ್ಟವನು' ಎಂದು ನಿಂದಿಸಿದ್ದಾರೆ. 'ಹೆಸರಿಗೆ ಆಚಾರ್ಯ, ಮಾಡೋದೆಲ್ಲ ಅನಾಚಾರ, ಬರಿಯೋದೆಲ್ಲ ಬೃಂದಾವನ ಅನ್ನೋ ಹಾಗಾಯಿತು ಇವನ ಕಥೆ' ಎಂದು ಪ್ರಸನ್ನ ಎಂಬವರು ಕಮೆಂಟ್ ಮಾಡಿದ್ದಾರೆ.

ಬಿಜೆಪಿ ದಕ್ಷಿಣ ಕನ್ನಡ ಎಂಬ ಫೇಸ್ಬುಕ್ ಖಾತೆಯಿಂದ 'ಗುಲಾಮಿ ಮನಸ್ಥಿತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಸುಳ್ಳು ಪ್ರಚಾರಗಳನ್ನು ಬಯಲಿಗೆಳೆದ ಸುವರ್ಣ ನ್ಯೂಸ್' ಎಂದು ಸುವರ್ಣ ನ್ಯೂಸ್‌ ಚಾನೆಲ್‌ ನ ವಿಡಿಯೋ ಪೋಸ್ಟ್ ಮಾಡಲಾಗಿದೆ. 

''ಸತೀಶ್ ಆಚಾರ್ಯ ಅನ್ನುವ ವ್ಯಂಗ್ಯ ಚಿತ್ರಕಾರ ಭಾರತ ಸರಕಾರದ ಲಸಿಕೆ ಅಭಿಯಾನವನ್ನು ಎಗ್ಗಿಲ್ಲದೆ ಟೀಕಿಸಿ ಚಿತ್ರ ಬರೆದ, ಅದನ್ನು ಕಾಂಗ್ರೆಸ್ ಗುಲಾಮರು, ಆಂದೋಲನ ಜೀವಿಗಳು ಗಂಜಿ ಗಿರಾಕಿಗಳು ಎಗ್ಗಿಲ್ಲದೆ ಹಂಚಿದರು. ನನ್ನ ಒಬ್ಬ (ಕಾಂಗ್ರೆಸ್) ಸ್ನೇಹಿತನಂತೂ ಲಸಿಕೆ ತೆಗೆದುಕೊಳ್ಳುವವರ ಮಾನಸಿಕ ಆರೋಗ್ಯವನ್ನು ಒಮ್ಮೆ ಪರೀಕ್ಷೆ ಮಾಡಬೇಕು ಅನ್ನುವಂತೆ ವ್ಯಂಗ್ಯ ಮಾಡಿದ್ದ. ಈಗ ಇವರೆಲ್ಲಾ ಯಾವ ಗುಂಡಿಗೆ ಹಾರ್ತಾರೆ'' ಎಂದು ಅಜಿತ್ ಶೆಟ್ಟಿ ಎಂಬಾತ ಪೋಸ್ಟ್ ಮಾಡಿದ್ದಾನೆ. ಇದೇ ರೀತಿ ಹಲವರು ಸತೀಶ್ ಆಚಾರ್ಯ ಬಗ್ಗೆ ಪೋಸ್ಟ್, ಕಮೆಂಟ್ ಮಾಡಿದ್ದು, ಕೆಟ್ಟದಾಗಿ ನಿಂದಿಸಿದ್ದಾರೆ.

ಸತೀಶ್ ಆಚಾರ್ಯ ಪ್ರತಿಕ್ರಿಯೆ

''ಐಟಿ ಸೆಲ್ಲಿನ ಸೆಲೆಬ್ರಿಟಿ ಯೋಧರಿಗೆ ಈ ಕಾರ್ಟೂನುಗಳು ವ್ಯಾಕ್ಸಿನ್ ವಿರುದ್ಧವಲ್ಲ, ವ್ಯಾಕ್ಸಿನಿನ ರಾಜಕೀಯಕರಣದ ವಿರುದ್ಧ‌ (ಬಿಹಾರ್ ಚುನಾವಣೆಯಲ್ಲಿ ಬಿಜೆಪಿ ಮತದಾರರಿಗೆ ಉಚಿತ ವ್ಯಾಕ್ಸಿನಿನ ಆಮಿಷ ಒಡ್ಡಿದ್ದು, ವ್ಯಾಕ್ಸಿನೊಂದರ ಟ್ರಾಯಲ್ ಮುಗಿಯೋ ಮೊದಲೇ ರಾಜಕೀಯ ಲಾಭಕ್ಕಾಗಿ ವ್ಯಾಕ್ಸಿನ್ ಬಳಕೆಗೆ ಒತ್ತಡ ಸೇರಿದ್ದು ಇತ್ಯಾದಿ) ಅನ್ನೋವಷ್ಟೂ ಕಾಮನ್ ಸೆನ್ಸ್ ಇದ್ದಿದ್ದರೆ ಸ್ವಂತ ಬುದ್ಧಿ ಅಡವಿಟ್ಟು ಐಟಿ ಸೆಲ್ಲಿನಲ್ಲಿ ಕೊಳೆಯುತ್ತಿರಲಿಲ್ಲ.
ಪುಣ್ಯಕ್ಕೆ ಮೋದಿಜೀ ಶೋಧಿಸಿದ ವ್ಯಾಕ್ಸಿನ್ ಹಾಕಿಸ್ಕೋಂಡ್ರಲ್ಲ ಅಂತ ಬರಿಲಿಲ್ಲ! ಅಬ್ಬಾ! ಎಂದು ಟ್ರೋಲ್ ಗಳ ಬಗ್ಗೆ ಸತೀಶ್ ಆಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಬಲಕ್ಕೆ ನಿಂತ ಗಣ್ಯರು

ಬಲಪಂಥೀಯರ ಟೀಕೆ ಮತ್ತು ಜಾತಿ ನಿಂದನೆಗೆ ಒಳಗಾದ ಬೆನ್ನಲ್ಲೇ ಹಲವರು ಸತೀಶ್‌ ಆಚಾರ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಾಹಿತಿ ನಾ.ದಿವಾಕರ, ಖ್ಯಾತ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ರಾಜಾರಾಂ ತಲ್ಲೂರು, ವ್ಯಂಗ್ಯ ಚಿತ್ರಕಾರರಾದ ದಿನೇಶ್ ಕುಕ್ಕುಜಡ್ಕ, ಪಿ.ಮುಹಮ್ಮದ್ ಸಹಿತ ಹಲವು ಮಂದಿ ಸತೀಶ್‌ ಆಚಾರ್ಯ ಪರ ಪೋಸ್ಟ್ ಮಾಡಿ ಅವರನ್ನು ಬೆಂಬಲಿಸಿದ್ದಾರೆ.

ಸತೀಶ್ ಅವರ ಬಗ್ಗೆ ಟಿವಿ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದ ಅಜಿತ್ ಹನುಮಕ್ಕನವರ್‌ ಬಗ್ಗೆ ಬರೆದಿರುವ ಸಾಹಿತಿ ನಾ.ದಿವಾಕರ ಅವರು, ಯಾವ ರೀತಿಯಿಂದ ನೋಡಿದರೂ, ಯಾವ ಮಗ್ಗುಲಿನಿಂದ‌ ನೋಡಿದರೂ ನಿಮ್ಮನ್ನು ಪತ್ರಕರ್ತ ಎಂದು ಭಾವಿಸಲಾಗುವುದಿಲ್ಲ. ಒಬ್ಬ ಪತ್ರಕರ್ತನಿಗೆ, ಅದರಲ್ಲೂ ಸುದ್ದಿ ಸಂಪಾದಕನಿಗೆ ಮೂಲತಃ ಭಾಷಾ ಸೌಜನ್ಯ, ಭಾಷಾ ಸಭ್ಯತೆ ಮತ್ತು ಸಂಯಮ ಇರಬೇಕು. ನಿಮ್ಮಿಂದ ಇದನ್ನು ನಿರೀಕ್ಷಿಸುವುದೂ ಸರಿಯಲ್ಲ ಎನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀವೂ ಟ್ರೋಲಿಗರ ಭಾಷೆಯನ್ನೇ ಬಳಸಿ ಸತೀಶ್ ಅವರಿಗೆ ಕೆರೆ ಹಾಳುಬಾವಿ ನೋಡಿಕೊಳ್ಳಿ ಎಂದು ಹೇಳಲು‌ ನಿಮಗೇನು ಅಧಿಕಾರವಿದೆ. ನಿಮಗೆ ಲಜ್ಜೆ ಉಂಟಾಗುವುದಿಲ್ಲವೇ ? ನೀವೊಬ್ಬ ಬಿಜೆಪಿ ವಕ್ತಾರರಾಗಿಯೋ, ಅಭಿಮಾನಿಯಾಗಿಯೋ ಹೀಗೆ ಹೇಳಿದ್ದರೆ ಅಡ್ಡಿಯಿಲ್ಲ. ನೀವು ಕುಳಿತುಕೊಳ್ಳುವ ಕುರ್ಚಿಗೆ ಮತ್ತು ಆ ಕಚೇರಿಗೆ ಒಂದು ಪಾವಿತ್ರ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

''ನಿನ್ನೆ ಮೊನ್ನೆ ಮತ್ತೆ ನನ್ನ ಕಾರ್ಟೂನ್ ಗಳ ನೆಪವಾಗಿ ನನ್ನ ಮೇಲೆ ದಾಳಿ ನಡೆದಿತ್ತು. ಇವತ್ತು ನಮ್ಮನೆಚ್ಚಿನ ಸತೀಶ್ ಆಚಾರ್ಯರ ಮೇಲೆ! ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ. ಆದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಷಾದ ಅಷ್ಟೆ! ಯಾವಾಗಲೂ ನಿಮ್ಮ ಜೊತೆಗಿದ್ದೇವೆ  ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! ಎಂದು ವ್ಯಂಗ್ಯ ಚಿತ್ರಕಾರರಾದ ದಿನೇಶ್ ಕುಕ್ಕುಜಡ್ಕ ಬರೆದಿದ್ದಾರೆ.

''ಕೆಲವು ದಿನಗಳಿಂದ ಕೆಲವು ಮಭ್ಭಕ್ತರು ಕಾರ್ಟೂನಿಸ್ಟ್ ಗೆಳೆಯ ಸತೀಶ್‌ ಆಚಾರ್ಯ ಅವರ ಹಿಂದೆ ಬಿದ್ದಿದ್ದಾರೆ. ಮೊನ್ನೆ ಟ್ವಿಟ್ಟರಲ್ಲಿ ಕೆಲವರು ಸತೀಶರ ಜಾತಿಯನ್ನು ಪ್ರಸ್ತಾಪಿಸಿ ಹೀಗಳೆಯುವುದು ಕಂಡು ಆಘಾತಪಟ್ಟೆ. ಈಗಿನ ಕೆಲವು 'ಹಿಂದೂ ಧರ್ಮ ರಕ್ಷಕ'ರಿಗೆ ಅವರ ಜಾತಿ ಪತ್ತೆ ಮಾಡಬೇಕು; ನಂತರ ಅದನ್ನು ಎತ್ತಿ ಹೇಳಿ ಅವಮಾನಮಾಡಬೇಕು. ಆ ಟ್ರೋಲಿಂಗ್ ಮಾಡುತ್ತಿದ್ದ ಹೆಸರುಗಳೆಲ್ಲ ಮೇಲ್ಜಾತಿಯನ್ನು ಸೂಚಿಸುತ್ತಿದ್ದವು. ಸತೀಶ್, ಇದು ನಿಮಗೆ ಹೊಸ ಅನುಭವವೇನೂ ಅಲ್ಲ. ಇಂಥ ವೈರಸಗಳಿಗೆ ಕಳೆದ ಕೆಲವು ವರ್ಷಗಳಿಂದ ನಮ್ಮೊಳಗೆಯೇ ಆ್ಯಂಟಿ ಬಾಡೀಸ್ ನಿರ್ಮಾಣ ಆಗಿವೆ. ಟ್ರೋಲ್ ವೈರಸ್ ಗಳ ಕಾಲ ಮುಗಿಯುತ್ತಾ ಬಂತು'' ಎಂದು ವ್ಯಂಗ್ಯ ಚಿತ್ರಕಾರ ಪಿ.ಮುಹಮ್ಮದ್ ತಿಳಿಸಿದ್ದಾರೆ.

''ಅಜಿತ್ ಹನುಮಕ್ಕನವರ್ ತನ್ನ ನಾಚಿಕೆಗೇಡು ಪತ್ರಿಕಾ ವೃತ್ತಿಗಾಗಿ ಹಾಳು ಬಾವಿ, ಕೆರೆಗೆ ಹಾರುವ ನಿರ್ಧಾರ ಮಾಡಿದರೆ ಕರ್ನಾಟಕದಲ್ಲಿರುವ ಹಾಳು ಬಾವಿ, ಕೆರೆಗಳು ಸಾಕಾಗಲಿಕ್ಲಿಲ್ಲ. ಡೋಂಟ್ ವರಿ ಸತೀಶ್ ಆಚಾರ್ಯ ಇಂತವರು ಹಾಳು ಬಾವಿಯ ಬಳಿ ಹೋದರೆ ಹಾಳು ಬಾವಿಯೇ ನಾಚಿಕೊಂಡೀತು'' ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಬರೆದಿದ್ದಾರೆ. 

''ದುಷ್ಟ ಸಂಹಾರ‌ನಿರತ ಚತುರ್ಭಜರು. ಬಾಡಿಗೆ ಸೈನಿಕರು ಎಷ್ಟೇ ದಾಳಿ‌ ಮಾಡಲಿ, ಗೆಲುವು ಇವರದ್ದೇ ಮತ್ತು ನಮ್ಮದು ಕೂಡಾ'' ಎಂದು ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪೋಸ್ಟ್ ಮಾಡಿದ್ದು, ಸತೀಶ್‌ ಆಚಾರ್ಯ ಸೇರಿ ನಾಲ್ವರು ವ್ಯಂಗ್ಯ ಚಿತ್ರಕಾರರ ಫೋಟೊ ಪ್ರಕಟಿಸಿದ್ದಾರೆ.

'ಸಹನೆ ಇಟ್ಟುಕೊಳ್ಳಿ. ಆಟಕ್ಕೆ ಆಟ-ಕಾಸಿಗೆ ಕಾಸು ಸ್ಕೀಮ್ ಇದು! ಅವರಿಗೂ ಗೊತ್ತು, ಗೆಳೆಯ ಸತೀಶ್ ಆಚಾರ್ಯ ಅವರಿಗೆ ಈ ಆಟದಿಂದ ಕಿರಿಕಿರಿಗಿಂತ ಹೆಚ್ಚೇನೂ ಆಗೋದಿಲ್ಲ ಅಂತ. ಸತೀಶ್ ತಮ್ಮ ಪ್ರತಿಭೆಯಲ್ಲಿ, ವೃತ್ತಿಯಲ್ಲಿ ಏರಿರುವ ಎತ್ತರದ ಏಣಿಯ ಕೆಳಗಿನ ಹುಲ್ಲುಗಳಿಗಿಂತ ಸಣ್ಣ ಜನ, ಸತೀಶ್ ಅವರ ಎತ್ತರಕ್ಕೆ ಎಂಜಲುಗಿಯಲು ಪ್ರಯತ್ನಿಸಿದ್ದಾರೆ. ಸ್ವಲ್ಪ ಸಹನೆ ಇಟ್ಟು ಕಾದರೆ, ಆ ಎಂಜಲಿನ ವಿಷದ ಭಾರಕ್ಕೆ ಅದು ನೇರ ಹೋಗಿ ಬೀಳುವುದು ಉಗಿದವರ ಮುಖದ ಮೇಲೇ. ಹಾಗಾಗುವ ಮೊದಲೇ, ಸಹನೆ ಇಲ್ಲದೇ, ಎಲ್ಲ ಒಟ್ಟಾಗಿ ಅದನ್ನು ತಟ್ಟಿ ತಟ್ಟಿ ಆಡಲಿ, ಉಗುಳು ಕೆಳಗೆ ಬೀಳುವ ಮೊದಲೇ ಆವಿ ಆಗಲಿ ಎಂದು ಕಾಯುವ, ಆ ತಟ್ಟುವಿಕೆಯಿಂದ ವೈರಲ್ ಆಗುವ ಕ್ಲಿಕ್‌ಗಳಲ್ಲೇ ನಾಲ್ಕು ಕಾಸು ಮಾಡಿಕೊಳ್ಳುವ ಅವರ ಉದ್ದೇಶಿತ ಆಟದಲ್ಲಿ ಪಾಲ್ಗೊಳ್ಳಬೇಡಿ ಪ್ಲೀಸ್.
ಹಾಗಾದ್ರೆ ಏನು ಮಾಡಬೇಕು ಅಂತೀರಾ?

ವಿಷಜಂತುಗಳು ಹೀಗೆ ಬೆತ್ತಲಾದಾಗ, ಮುಖ ತಿರುಗಿಸಿ, ನಿರ್ಲಕ್ಷಿಸಿ ಬಿಡಿ. ತಮ್ಮದಕ್ಕೆ ಬೆಲೆ ಇಷ್ಟೇ ಕ್ಲಿಕ್ ಕಾಸೂ ಗಿಟ್ಟೋದಿಲ್ಲ ಅಂತ ಗೊತ್ತಾಗ್ಲಿ ಅವರಿಗೆ.
ಈ ಆಟದ ರೂಲ್ ಇಷ್ಟೇ ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ. 

ಇದೇ ಹಲವಾರು ಮಂದಿ ಸತೀಶ್‌ ಆಚಾರ್ಯ ಅವರ ಬೆಂಬಲಕ್ಕೆ ನಿಂತಿದ್ದು, ಟ್ವಿಟರ್, ಫೇಸ್ಬುಕ್ ನಲ್ಲಿ ಪೋಸ್ಟ್, ಕಮೆಂಟ್ ಗಳನ್ನು ಮಾಡಿದ್ದಾರೆ.

ಅಜಿತ್ ಹನುಮಕ್ಕನವರ್ ಅವರೇ, ಮೊದಲು ನಿಮಗೆ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಯಾವ ರೀತಿಯಿಂದ ನೋಡಿದರೂ, ಯಾವ ಮಗ್ಗುಲಿನಿಂದ‌ ನೋಡಿದರೂ...

Posted by Divakar Narayanarao N on Saturday, 1 May 2021

ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್ ಗಳೂ ನಡೆಯುವುದು...

Posted by Dinesh Kukkujadka on Saturday, 1 May 2021

ದುಷ್ಟ ಸಂಹಾರ‌ನಿರತ ಚತುರ್ಭಜರು. ಬಾಡಿಗೆ ಸೈನಿಕರು ಎಷ್ಟೇ ದಾಳಿ‌ ಮಾಡಲಿ, ಗೆಲುವು ಇವರದ್ದೇ ಮತ್ತು ನಮ್ಮದು ಕೂಡಾ.

Posted by Dinesh Amin on Saturday, 1 May 2021
Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News