ಲಸಿಕೆ ಗಾಗಿ ಫೋನ್: ಒತ್ತಡ ತಡೆಯಲಾರದೆ ಲಂಡನ್ ಗೆ ಹೋದ ಕೋವಿಶೀಲ್ಡ್ ಕಂಪೆನಿ ಮಾಲಕ
ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆ ತಯಾರಿಕೆಯ ನೇತೃತ್ವವಹಿಸಿರುವ ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಅದಾರ್ ಪೂನವಾಲಾ ಅವರು ವ್ಯಾಕ್ಸಿನ್ ಪೂರೈಕೆಗಾಗಿ ತನ್ನ ಮೇಲೆ ಉಂಟಾಗಿರುವ ತೀವ್ರ ಒತ್ತಡವನ್ನು ತಾಳಲಾರದೆ ಲಂಡನ್ ಗೆ ತೆರಳಿದ್ದಾರೆ ಎಂದು thehindu.com ವರದಿ ಮಾಡಿದೆ.
ಭಾರತವು ಕೊರೋನ ವೈರಸ್ ಸಾಂಕ್ರಾಮಿಕದ 2ನೇ ಅಲೆ ವಿರುದ್ದ ಹೋರಾಡುತ್ತಿರುವಾಗ ಕೋವಿಡ್-19 ಲಸಿಕೆಗಳ ಉತ್ಪಾದನೆಗಾಗಿ ತಾನು ಎದುರಿಸುತ್ತಿರುವ ಒತ್ತಡದ ಕುರಿತು ಪೂನಾವಾಲಾ ಶನಿವಾರ ಮಾತನಾಡಿದ್ದಾರೆ.
ಈ ವಾರದ ಆರಂಭದಲ್ಲಿ ಪೂನವಾಲಾಗೆ ಭಾರತದ ಸರಕಾರವು ವೈ ದರ್ಜೆಯ ಭದ್ರತೆಯನ್ನು ಒದಗಿಸಿದ ನಂತರ 'ದಿ ಟೈಮ್ಸ್ಗೆ' ನೀಡಿದ ಸಂದರ್ಶನದಲ್ಲಿ ಮೊದಲ ಹೇಳಿಕೆ ನೀಡಿದ ಅವರು, ಭಾರತದಲ್ಲಿ ತಾನು ಕೆಲವು ಪ್ರಭಾವಶಾಲಿ ವ್ಯಕ್ತಿಗಳಿಂದ ಆಕ್ರಮಣಕಾರಿ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಆ ವ್ಯಕ್ತಿಗಳು ನನಗೆ ಕೋವಿಶೀಲ್ಡ್ ಪೂರೈಸುವಂತೆ ಬೇಡಿಕೆ ಇಡುತ್ತಿದ್ದಾರೆ. ನನ್ನ ಮೇಲಿನ ಸಾಕಷ್ಟು ಒತ್ತಡವು ನಾನು ಪತ್ನಿ ಹಾಗೂ ಮಕ್ಕಳೊಂದಿಗೆ ಲಂಡನ್ ಗೆ ಬರುವ ನಿರ್ಧಾರಕ್ಕೆ ಕಾರಣವಾಗಿದೆ ಎಂದು 40ರ ಹರೆಯದ ಉದ್ಯಮಿ ಹೇಳಿದರು.
ನಾನು ಇಲ್ಲಿ (ಲಂಡನ್)ಹೆಚ್ಚು ಸಮಯ ಇರುತ್ತೇನೆ. ಏಕೆಂದರೆ ನಾನು ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ವಾಪಸಾಗಲು ಬಯಸುವುದಿಲ್ಲ. ಎಲ್ಲವೂ ನನ್ನ ಹೆಗಲ ಮೇಲೆ ಬೀಳುತ್ತದೆ. ನಾನೊಬ್ಬನೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಾನು ಎದುರಿಸುತ್ತಿರುವ ನಿರೀಕ್ಷೆ ಹಾಗೂ ಆಕ್ರಮಣಶೀಲತೆ ಅಭೂತಪೂರ್ವವಾಗಿದೆ. ಲಸಿಕೆ ಪಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಭಾರತದಿಂದ ಹೊರಗೆ, ಅಂದರೆ ಬ್ರಿಟನ್ ನಲ್ಲಿ ಲಸಿಕೆ ತಯಾರಿಸುವ ಯೋಜನೆ ಇದೆ ಎಂಬ ಸುಳಿವನ್ನು ಪೂನವಾಲಾ ನೀಡಿದ್ದಾರೆ.