ಪಾಂಬೂರು ಹೊಳೆಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು

Update: 2021-05-02 16:31 GMT

ಶಿರ್ವ, ಮೇ 2: ಬಾವಿ ಕೆಲಸ ಮುಗಿಸಿ ಕೈಕಾಲು ತೊಳೆಯಲು ಪಾಪಾ ನಾಶಿನಿ ಹೊಳೆಗೆ ಇಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ 4 ಗಂಟೆ ಸುಮಾರಿಗೆ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಪಾಂಬೂರು ಅಮಾಸೆಕರಿಯ ಸೇತುವೆ ಸಮೀಪ ನಡೆದಿದೆ.

ಮೃತರನ್ನು ಕಟಪಾಡಿ ಸುಭಾಸ್‌ ನಗರದ ಸರಕಾರಿಗುಡ್ಡೆ ನಿವಾಸಿ ಅಬ್ದುಲ್ ಸತ್ತಾರ್ ಎಂಬವರ ಮಗ ಮುಹಮ್ಮದ್ ಜಾಬೀರ್(18), ಇಕ್ಬಾಲ್ ಮುಸ್ತಾಕ್ ಎಂಬವರ ಮಗ ಮುಹಮ್ಮದ್ ರಿಝ್ವಾನ್(18) ಮತ್ತು ಶಂಕರಪುರ ಮೂಡಬೆಟ್ಟು ನಿವಾಸಿ ಲಿಗೋರಿ ಕ್ಯಾಸ್ತಲಿನೋ ಎಂಬವರ ಮಗ ಕೆಲ್ವಿನ್ ಕಸ್ತಲಿನೋ(19) ಎಂದು ಗುರುತಿಸಲಾಗಿದೆ. ಉಳಿದಂತೆ ಸರಕಾರಿಗುಡ್ಡೆಯ ಲತೀಫ್(19), ಅಶ್ಫಕ್(18) ಹಾಗೂ ಕುರ್ಕಾಲಿನ ಸಂಕೇತ್(18) ಎಂಬವರು ಪಾರಾಗಿದ್ದಾರೆ.

ಕೆಲ್ವಿನ್ ಬೇಕರಿಯಲ್ಲಿ, ಜಾಬೀರ್ ಗ್ಯಾರೇಜಿನಲ್ಲಿ ಮತ್ತು ಉಳಿದವರು ಪೈಟಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇವರೆಲ್ಲ ಕಳೆದ ನಾಲ್ಕು ದಿನಗಳಿಂದ ಶಿರ್ವ ಮಟ್ಟಾರಿನಲ್ಲಿ ಬಾವಿಯ ಕೆಲಸಕ್ಕೆ ಹೋಗುತ್ತಿದ್ದರು. ಇಂದು ಬಾವಿ ಕೆಲಸ ಮುಗಿಸಿ ಬೈಕಿನಲ್ಲಿ ವಾಪಾಸ್ಸು ಬರುತ್ತಿದ್ದ ಇವರು, ಕೈಕಾಲು ತೊಳೆಯಲು ಹೊಳೆಯ ಬಳಿ ಹೋಗಿದ್ದರೆನ್ನ ಲಾಗಿದೆ.

ಈ ವೇಳೆ ಮೊದಲು ಕೆಲ್ವಿನ್ ಆಯತಪ್ಪಿ ನೀರಿಗೆ ಬಿದ್ದಿದ್ದು, ಆತನೊಂದಿಗೆ ರಿಝ್ವಾನ್ ಮತ್ತು ಜಾಬೀರ್ ಕೂಡ ನೀರಿಗೆ ಬಿದ್ದರೆನ್ನಲಾಗಿದೆ. ಈಜು ಬಾರದ ಈ ಮೂವರು ನೀರಿನಲ್ಲಿ ಮುಳುಗುತ್ತಿದ್ದಾಗ ಈಜು ಬರುತ್ತಿದ್ದ ಲತೀಫ್ ಇವರನ್ನು ಕಾಪಾಡಲು ಪ್ರಯತ್ನಿಸಿದ ಎನ್ನಲಾಗಿದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಆಗಮಿಸಿ ಹುಡುಕಾಟ ನಡೆಸಿದ್ದು, ಸಂಜೆ 5.30ರ ಸುಮಾರಿಗೆ ಮುಳುಗು ತಜ್ಞರಾದ ಈಶ್ವರ್ ಮಲ್ಪೆ, ನಮಿತ್ ಶೆಟ್ಟಿ ಪಡುಬೆಳ್ಳೆ ಮೃತದೇಹವನ್ನು ಮೇಲಕ್ಕೆತ್ತಿದರು ಎಂದು ತಿಳಿದು ಬಂದಿದೆ.

ಸತ್ತಾರ್ ಅವರ ಮೂವರು ಮಕ್ಕಳಲ್ಲಿ ಜಾಬೀರ್ ಕೊನೆಯವನಾಗಿದ್ದು, ಇಬ್ಬರು ಅಕ್ಕಂದಿರು ಇದ್ದಾರೆ. ಅದೇ ರೀತಿ ರಿಝ್ವಾನ್ ಕೂಡ ಕೊನೆಯವ ನಾಗಿದ್ದು, ಆತನಿಗೆ ಓರ್ವ ಅಕ್ಕ ಇದ್ದಾರೆ. ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಆಗಮಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಉಡುಪಿ ಜಿಲ್ಲಾ ಸ್ಪತ್ರೆಯಲ್ಲಿ ನಡೆಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News