ಪಂಚರಾಜ್ಯ ಚುನಾವಣೆ: ಮಂಕಾದ ಮೋದಿ ಅಲೆ

Update: 2021-05-02 19:14 GMT

ಹೊಸದಿಲ್ಲಿ,ಮೇ2: ಪಂಚರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರ ತೀರ್ಪು ರವಿವಾರ ಹೊರಬಿದ್ದಿದ್ದು, ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆಗೆ ಎಡಿಎಂಕೆ ತತ್ತರಿಸಿದ್ದು, ಡಿಎಂಕೆ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿಯೂ ಆಡಳಿತಾರೂಢ ಬಿಜೆಪಿಗೆ ಸ್ಬಷ್ಟ ಬಹುಮತಪಡೆದಿದ್ದು, ಸತತ ಎರಡನೆ ಬಾರಿಗೆ ಅಧಿಕಾರಕ್ಕೇರುವಲ್ಲಿ ಸಫಲವಾಗಿದೆ.ಕೇರಳದಲ್ಲಿ ಪಿಣರಾಯ್ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಪ್ರಚಂಡ ಗೆಲುವು ಸಾಧಿಸಿದೆ. ಕೇರಳದ ನಾಲ್ಕು ದಶಕಗಳ ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸತತ ಎರಡನೆ ಸಲ ಅಧಿಕಾರಕ್ಕೇರಿದ ದಾಖಲೆಯನ್ನು ಎಲ್‌ಡಿಎಫ್ ನಿರ್ಮಿಸಿದೆ.

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 213 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 78 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಎಡಪಕ್ಷಗಳು, ಕಾಂಗ್ರೆಸ್ ಎಡಪಕ್ಷಗಳು, ಕಾಂಗ್ರೆಸ್ ನೇತೃತ್ವದ ಸಂಯುಕ್ತ ವಿಕಾಸ್ ಮೋರ್ಚಾ ಒಂದೇ ಒಂದು ಸ್ಥಾನವನ್ನು ಗಳಿಸುವಲ್ಲಿ ವಿಫಲವಾಗಿವೆ. ಆದರೆ ಪ್ರತಿಷ್ಠೆಯ ಕಣವಾಗಿದ್ದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲಪ್ಪಿರುವುದು ಟಿಎಂಸಿಯ ಗೆಲುವಿನ ಸಂಭ್ರಮಕ್ಕೆ ತುಸು ಧಕ್ಕೆಯುಂಟು ಮಾಡಿದೆ.

ಈ ಕ್ಷೇತ್ರದಲ್ಲಿ ಮಮತಾ ಅವರು ಕೇವಲ ಎರಡು ತಿಂಗಳ ಹಿಂದಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅವರ ಎದುರು ಪರಾಭವಗೊಂಡಿದ್ದಾರೆ. ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 126 ಸ್ಥಾನಗಳಲ್ಲಿ 77ರಲ್ಲಿ ಕಮಲಪಕ್ಷ ಗೆಲುವಿನ ನಗೆ ಬೀರಿದೆ. ಒಂದು ಕಾಲದಲ್ಲಿ ತನ್ನ ಭದ್ರಕೋಟೆಯಾದ ಅಸ್ಸಾಂನಲ್ಲಿ ಮತ್ತೆ ಅಧಿಕಾರ ಹಿಡಿಯಲು ಹರಸಾಹಸಪಟ್ಟಿದ್ದ ಕಾಂಗ್ರೆಸ್‌ಗೆ ಈ ಸಲವೂ ನಿರಾಶೆಯಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 49 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ನಿರಾಶಾದಾಯಕ ಸಾಧನೆ ಮಾಡಿದೆ.
 
ಕೇರಳದಲ್ಲಿ ಎಡರಂಗ ವಿಜಯ ಪತಾಕೆ ಹಾರಿಸಿದೆ. ಆ ರಾಜ್ಯದಲ್ಲಿ ಎಲ್ಲಾ 140 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ 97 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 43 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ.
    
ತಮಿಳುನಾಡಿನಲ್ಲಿ ಅಡಳಿತ ವಿರೋಧಿ ಅಲೆಯಿಂದಾಗಿ ಎಡಿಎಂಕೆಗೆ ಮುಖಭಂಗವಾಗಿದೆ. ಪ್ರತಿಪಕ್ಷವಾದ ಡಿಎಂಕೆ ಹತ್ತು ವರ್ಷಗಳ ಬಳಿಕ ಮತ್ತೆ ಗದ್ದುಗೆ ಹಿಡಿಯಲಿದೆ. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳು ಒಟ್ಟು 149 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.ಎಡಿಎಂಕೆ, ಬಿಜೆಪಿ ಮೈತ್ರಿಕೂಟಕ್ಕೆ 89 ಸ್ಥಾನಗಳು ದೊರೆತಿವೆ.
  
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯಗೊಂಡಿದೆ. 30 ಸ್ಥಾನಗಳ ಪುದುಚೇರಿ ವಿಧಾನಸಭೆಯಲ್ಲಿ ಎನ್. ರಂಗಸ್ವಾಮಿ ಅವರ ಎಐಎನ್‌ಆರ್‌ಸಿ-ಬಿಜೆಪಿ ನೇತೃತ್ವದ ಮೈತ್ರಿಕೂಟ 14ರಲ್ಲಿ ಗೆಲುವು ಸಾಧಿಸಿದ್ದು, ಉಳಿದ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ.

ಪ.ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಮತದಾನ ನಡೆದಿತ್ತು. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆಗೆ ಸಾಕ್ಷಿಯಾದ ಪಶ್ಚಿಮಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News