ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಗೆ ಗೆಲುವು: ಮರು ಮತ ಎಣಿಕೆಗೆ ಟಿಎಂಸಿ ಒತ್ತಾಯ

Update: 2021-05-02 16:55 GMT

ಕೋಲ್ಕತಾ, ಮೇ 2: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಸಫಲರಾದರೂ, ನಂದಿಗ್ರಾಮದಲ್ಲಿ ಸೋಲನ್ನಪ್ಪಿದ್ದಾರೆ. ಮಮತಾ ಅವರು ಒಂದು ಕಾಲದ ತನ್ನ ನಿಕಟವರ್ತಿ, ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಎದುರು ಸೋಲನ್ನಪ್ಪಿದ್ದಾರೆ.

ಸುವೇಂದು ಅಧಿಕಾರಿ ಅವರು ಮಮತಾರನ್ನು 1,736 ಮತಗಳ ಅಂತರದಿಂದ ಸೋಲಿಸಿದ್ದಾರೆಂದು ಚುನಾವಣಾ ಆಯೋಗ ರವಿವಾರ ಸಂಜೆ ಘೋಷಿಸಿದೆ.

ಮತ ಎಣಿಕೆಯ ಆರಂಭಿಕ ಹಂತದಲ್ಲಿ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿಯವರಿಗಿಂತ ಹಿಂದೆ ಬಿದ್ದಿದ್ದರು. ಆದರೆ ಮಧ್ಯಾಹ್ನದ ವೇಳೆ ಅವರು 1200 ಮತಗಳಿಂದ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದರು. ಅಂತಿಮ ಹಂತದಲ್ಲಿ ಮಮತಾ ಬ್ಯಾನರ್ಜಿಯವರು ಜಯ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಕೆಲ ಸಮಯದ ಬಳಿಕ ಅದು ಅಂತಿಮ ಫಲಿತಾಂಶವಲ್ಲ, ಸುವೇಂದು ಅಧಿಕಾರಿ ಮಮತಾರನ್ನು ಮಣಿಸಿದ್ದಾರೆ ಎಂದು ಘೋಷಿಸಲಾಯಿತು.

ಈ ಗೊಂದಲದ ಬಗ್ಗೆ ವಿವಾದವೂ ಸೃಷ್ಟಿಯಾಗಿದೆ. ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಈಗಾಗಲೇ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಂದಿಗ್ರಾಮದಲ್ಲಿ ಮತಗಳ ಮರುಎಣಿಕೆ ನಡೆಯಬೇಕು ಎಂದು ಒತ್ತಾಯಿಸಲು ಡೆರೆಕ್ ಒಬ್ರಿಯಾನ್, ಫಿರ್ಹಾದ್ ಹಕೀಮ್ ಮತ್ತು ಕಲ್ಯಾಣ್ ಬ್ಯಾನರ್ಜಿಯವರನ್ನು ಒಳಗೊಂಡ ನಿಯೋಗ ಮುಖ್ಯ ಚುನಾವಣಾಧಿಕಾರಿಯವರನ್ನು ಭೇಟಿಯಾಗಲಿದ್ದಾರೆ.

2011ರಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರುವಲ್ಲಿ ನಂದಿಗ್ರಾಮ ಕ್ಷೇತ್ರವು ಮಹತ್ವದ ಪಾತ್ರ ವಹಿಸಿತ್ತು. ಸಿಂಗೂರ್ನಲ್ಲಿ ಟಾಟಾ ಕಾರು ತಯಾರಿಕಾ ಘಟಕದ ಸ್ಥಾಪನೆಗಾಗಿ ರೈತರ ಭೂಸ್ವಾಧೀನವನ್ನು ವಿರೋಧಿಸಿ, ಎಡರಂಗ ಸರಕಾರದ ವಿರುದ್ಧ ನಡೆದ ಚಳವಳಿಗೆ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭ ಸುವೇಂದು ಅಧಿಕಾರಿ ಅವರು ಮಮತಾ ಜೊತೆ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದರು. ಆನಂತರ ಸುವೇಂದು ಅಧಿಕಾರಿ ನಂದಿಗ್ರಾಮ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದಾರೆ. ಆದರೆ ಎರಡು ತಿಂಗಳ ಹಿಂದೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಟಿಎಂಸಿ ತೊರೆದ ಸುವೇಂದು ಅಧಿಕಾರಿ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಅವರ ಕುಟುಂಬ ಭಾರೀ ಪ್ರಭಾವವನ್ನು ಹೊಂದಿದೆ. ನಂದಿಗ್ರಾಮದಲ್ಲಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸುವೇಂದು ಅವರು ಮಮತಾಗೆ ಸವಾಲೊಡ್ಡಿದ್ದರು. ಇದನ್ನು ಸ್ವೀಕರಿಸಿದ ಮಮತಾ ಆ ಕ್ಷೇತ್ರದಿಂದ ಸ್ಪರ್ಧಿಗಿಳಿದಿದ್ದರು. ಸುವೇಂದು ಅಧಿಕಾರಿ ನಿರ್ಗಮನದ ಬೆನ್ನಿಗೆ ಹಲವಾರು ಟಿಎಂಸಿ ನಾಯಕರು ಕೂಡಾ ಟಿಎಂಸಿ ತೊರೆದು ಬಿಜೆಪಿ ಪಾಳಯ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News