ಉಡುಪಿ ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಕೊರತೆ ಇಲ್ಲ : ಜಿಲ್ಲಾಧಿಕಾರಿ ಜಿ.ಜಗದೀಶ್

Update: 2021-05-03 16:19 GMT

ಉಡುಪಿ, ಮೇ 3: ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಅಕ್ಸಿಜನ್‌ಗೆ ಯಾವುದೇ ಕೊರತೆ ಉಂಟಾಗಿಲ್ಲ. ಈಗಿರುವ ಸ್ಟಾಕ್ ಇನ್ನೂ 2 ರಿಂದ 4ದಿನಗಳಿಗೆ ಸಾಕಾಗುವಷ್ಟಿದೆ. ಅಲ್ಲದೇ ಇಲ್ಲಿಗೆ ನಿರಂತರವಾಗಿ ಆಕ್ಸಿಜನ್‌ ಸರಬರಾಜು ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಅಟ್ಟಹಾಸದ ನಡುವೆ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೊರತೆಯಿಂದ ನಾಡಿನಾದ್ಯಂತ ಜನರು ಸೂಕ್ತ ಚಿಕಿತ್ಸೆ ಸಿಗದೇ ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸದ್ಯ ಆಕ್ಸಿಜನ್ ಲಭ್ಯತೆಯ ಕುರಿತು ಪ್ರಶ್ನಿಸಿದಾಗ ಅವರು ಸದ್ಯ ಜಿಲ್ಲೆಗೆ ಆಕ್ಸಿಜನ್‌ನ ಕೊರತೆ ಎದುರಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಸ್ಟಾಕ್ ಇನ್ನೂ ಎರಡು ದಿನ ಸಾಲುವಷ್ಟಿದೆ. ಅಲ್ಲದೇ ಲಿಕ್ವಿಡ್ ಆಕ್ಸಿಜನ್‌ ಮಂಗಳೂರಿಗೆ ಈಗಾಗಲೇ ಆಗಮಿಸಿದೆ. ನಾಳೆ ಟ್ಯಾಂಕರ್ ಮೂಲಕ ಅದು ಇಲ್ಲಿಗೆ ಆಗಮಿಸಲಿದೆ. ಹೀಗಾಗಿ ನಮಗೆ ಆಕ್ಸಿಜನ್‌ನ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಆರು ಕೆ.ಎಲ್‌ನ ಲಿಕ್ವಿಡ್ ಆಕ್ಸಿಜನ್ ಘಟಕ ಕೆಲ ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದೆ. ಒಮ್ಮೆ ಭರ್ತಿ ಮಾಡಿದರೆ ಅದು 15 ದಿನಗಳಿಗೆ ಸಾಕಾಗುತ್ತದೆ. ಈಗ ಐಸಿಯು ಹಾಗೂ ವೆಂಟಿಲೇಟರ್ ಭರ್ತಿ ಯಾಗಿದ್ದು, ಅಕ್ಸಿಜನ್ ಬೆಡ್‌ಗಳೂ ಭರ್ತಿಯಾಗಿರುವುದರಿಂದ ಅದರ ಬಳಕೆ ಹೆಚ್ಚಿದೆ ಎಂದು ಡಾ.ನಾಯಕ್ ತಿಳಿಸಿದರು.

ಹೆಚ್ಚುತ್ತಿದೆ ವೆಂಟಿಲೇಟರ್, ಐಸಿಯುಗೆ ಬೇಡಿಕೆ

ಈ ನಡುವೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಬರುವ ಕೊರೋನ ಪಾಸಿಟಿವ್ ಸಂಖ್ಯೆ 500ರ ಗಡಿ ದಾಟುತ್ತಿರುವುದರಿಂದ ಉಸಿರಾಟದ ತೊಂದರೆ ಹಾಗೂ ಇತರ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿ ರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಹಜವಾಗಿ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್‌ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ 23ಮಂದಿ ಐಸಿಯು ಹಾಗೂ 15 ಮಂದಿ ವೆಂಟಿಲೇಟರ್ ಚಿಕಿತ್ಸೆಗೆ ಸೇರ್ಪಡೆಗೊಂಡಿದ್ದಾರೆ.

ಅಲ್ಲದೇ ಕಳೆದೊಂದು ವರ್ಷದಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸತತವಾಗಿ ಮಾಡಿಕೊಳ್ಳುತ್ತಿರುವ ಮನವಿಗಳ ಹೊರತಾಗಿಯೂ ಜನರು ರೋಗದ ಲಕ್ಷಣ ಕಾಣಿಸಿದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ, ಮನೆಯಲ್ಲಿ ಜ್ವರ ಹಾಗೂ ಉಸಿರಾಟದ ತೊಂದರೆ ಹಾಗೂ ಕೋವಿಡ್‌ನ ಇತರ ಲಕ್ಷಣಗಳಿಂದ ನರಳಿ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಧಾವಿಸುತ್ತಿರುವುದರಿಂದ ಆಸ್ಪತ್ರೆಗಳ ಮೇಲೂ ಒತ್ತಡ ಬೀಳುತ್ತಿದೆ. ಅಂಥವರ ಚಿಕಿತ್ಸೆಯೂ ಜಟಿಲಗೊಳ್ಳು ತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಬೆಡ್‌ಗೆ ಕೊರತೆ ಇಲ್ಲ: ಕೋವಿಡ್ ಚಿಕಿತ್ಸೆಗೆ ಜಿಲ್ಲೆಯಲ್ಲಿ ಬೆಡ್‌ನ ಕೊರತೆ ಇಲ್ಲ. ಆದರೆ ಜನರು ತಿಳುವಳಿಕೆಯ ಕೊರತೆಯಿಂದ ಹಾಗೂ ಖಾಸಗಿ ಆಸ್ಪತ್ರೆಯೇ ಬೇಕೆಂದು ನೇರವಾಗಿ ಅಂಥ ಆಸ್ಪತ್ರೆಗೆ ತೆರಳುತ್ತಿರುವುದರಿಂದ ಅಲ್ಲಿ ಹಾಸಿಗೆಗಳಿಲ್ಲ ಎಂಬ ಉತ್ತರ ಪಡೆದಿರಬಹುದು. ಜಿಲ್ಲೆಯ 38 ಖಾಸಗಿ ಆಸ್ಪತ್ರೆಗಳಲ್ಲಿ ಅಲ್ಲಿನ ಸಾಮರ್ಥ್ಯದ ಶೇ.50ರಷ್ಟು ಬೆಡ್‌ಗಳನ್ನು -ಇದರಲ್ಲಿ ಐಸಿಯು, ವೆಂಟಿಲೇಟರ್, ಎಚ್‌ಡಿಯು ಸೇರಿದೆ- ಕೋವಿಡ್ ಚಿಕಿತ್ಸೆಗಾಗಿ ಕಾದಿರಿಸಲಾಗಿದೆ.

ಈ ಬೆಡ್‌ಗಳನ್ನು ಸರಕಾರಿ ವ್ಯವಸ್ಥೆ, ಇಲಾಖೆಯ ಶಿಫಾರಸ್ಸಿನ ಮೇಲೆ ಅವರು ತುಂಬಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರು ಡಿಎಚ್‌ಓ, ಕೋವಿಡ್ ನೋಡೆಲ್ ಅಧಿಕಾರಿ ಅಥವಾ ತಾಲೂಕು ಮಟ್ಟದಲ್ಲಿ ತೆರೆದಿರುವ ಸಹಾಯವಾಣಿಯ ಮೂಲಕ ಶಿಫಾರಸ್ಸು ಪತ್ರ ಪಡೆದು ಲಭ್ಯವಿರುವಲ್ಲಿ ಚಿಕಿತ್ಸೆ ಪಡೆಯಬಹುದು. ಅವರನ್ನು ಸರಕಾರಿ ಅಂಬುಲೆನ್ಸ್‌ನಲ್ಲೇ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದರು.

ಜಿಲ್ಲೆಯ 38 ಖಾಸಗಿ ಹಾಗೂ ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆ ಮತ್ತು ಉಡುಪಿಯ ಜಿಲ್ಲಾಸ್ಪತ್ರೆಗಳಲ್ಲಿ ಇರುವ ಒಟ್ಟು 4685 ಬೆಡ್‌ಗಳಲ್ಲಿ 2326 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆಂದು ಕಾದಿರಿಸಲಾಗಿದೆ. ರವಿವಾರ ರಾತ್ರಿಯವರೆಗೆ ಇವುಗಳಲ್ಲಿ 571 ಬೆಡ್‌ಗಳು ಮಾತ್ರ ಭರ್ತಿಯಾಗಿದ್ದು, 1762 ಇನ್ನು ಖಾಲಿಯಾಗಿವೆ ಎಂದು ಅವರು ತಿಳಿಸಿದರು.

ಸರಕಾರಿ ವ್ಯವಸ್ಥೆಗೆ ಬಂದರೆ ಇರುವ ಒಟ್ಟು 357 ಹಾಸಿಗೆಗಳಲ್ಲಿ 136 ರವಿವಾರದವರೆಗೆ ಭರ್ತಿಯಾಗಿದ್ದು, 221 ಖಾಲಿ ಇವೆ. ಆದರೆ ಸರಕಾರಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್‌ಗಳು ಭರ್ತಿಯಾಗಿವೆ ಎಂದು ಅವರು ಹೇಳಿದರು.

ಸಹಾಯವಾಣಿ ನಂ.: ಕೋವಿಡ್ ಪಾಸಿಟಿವ್ ಬಂದವರು ಹೆಚ್ಚಿನ ಮಾಹಿತಿ ಹಾಗೂ ಆಸ್ಪತ್ರೆಗೆ ದಾಖಲಾಗಲು ಸಂಪರ್ಕಿಸಬೇಕಾದ ಸಹಾಯವಾಣಿ ನಂ.. ನಂ.. ಉಡುಪಿ: 9663957222, 9663950222, ಕುಂದಾಪುರ: 6363862122 , 7483984733. ಕಾರ್ಕಳ:7676227624, 7411323408.

ಜಿಲ್ಲೆಯಲ್ಲಿ 195 ಐಸಿಯು, 78 ವೆಂಟಿಲೇಟರ್, 111 ಎಚ್‌ಡಿಯು

ಕೊರೋನ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮೂರು ಸರಕಾರಿ ಆಸ್ಪತ್ರೆ ಹಾಗೂ ಜಿಲ್ಲೆಯ 38 ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾ ಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ 28 ಐಸಿಯು, 58 ಎಚ್‌ಡಿಯು ಹಾಗೂ 8 ವೆಂಟಿಲೇಟರ್, 124 ಆಕ್ಸಿಜನ್ ಬೆಡ್, 132 ಸಾಮಾನ್ಯ ಬೆಡ್‌ಗಳಿವೆ ಎಂದು ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳು ತಿಳಿಸಿವೆ.

ರವಿವಾರ ರಾತ್ರಿಯವರೆಗಿನ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಯಂತೆ ಜಿಲ್ಲೆಯಲ್ಲಿರುವ 955 ಆಕ್ಸಿಜನ್ ಸಹಿತ ಬೆಡ್‌ಗಳಲ್ಲಿ 177 ಭರ್ತಿಯಾಗಿದ್ದು 788 ಖಾಲಿ ಇವೆ. 956 ಸಾಮಾನ್ಯ ಬೆಡ್‌ಗಳಲ್ಲಿ 250 ಭರ್ತಿಯಾಗಿದ್ದು 706 ಖಾಲಿ ಇವೆ. 111 ಎಚ್‌ಡಿಯುನಲ್ಲಿ 36 ಭರ್ತಿಯಾಗಿದ್ದು, 77 ಖಾಲಿ ಉಳಿದಿವೆ. ಇನ್ನು 195 ಐಸಿಯು ಬೆಡ್‌ಗಳಲ್ಲಿ 63 ಭರ್ತಿಯಾಗಿ 129 ಖಾಲಿ ಇವೆ. ಎಚ್‌ಎಫ್‌ಎನ್‌ಸಿ ಡಿವೈಸ್ 31ಇದ್ದು 7 ಭರ್ತಿಯಾಗಿ 24 ಖಾಲಿ ಇವೆ. ಜಿಲ್ಲೆ ಯ ವಿವಿಧ ಆಸ್ಪತ್ರೆಗಳಲ್ಲಿರುವ 78 ವೆಂಟಿಲೇಟರ್‌ಗಳಲ್ಲಿ 38ರಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತಿದ್ದು 38 ಖಾಲಿ ಇವೆ ಎಂದು ಮಾಹಿತಿ ನೀಡಿದರು.

''ನಾವು ಪದೇ ಪದೇ ಮನವಿ ಮಾಡಿಕೊಂಡರೂ, ಜನತೆ ರೋಗ ಲಕ್ಷಣ ಕಾಣಿಸಿಕೊಂಡಾಕ್ಷಣ ಪರೀಕ್ಷೆಗೆ ಬಾರದೇ, ಮನೆಯಲ್ಲೇ ಇದ್ದು ರೋಗ ಉಲ್ಬಣಿಸಿದ ಬಳಿಕ ಬಂದರೆ ಐಸಿಯು, ವೆಂಟಿಲೇಟರ್ ನೀಡಲು ಕಷ್ಟವಾಗುತ್ತದೆ. ಕೊನೆಯ ಕ್ಷಣದಲ್ಲಿ ಅವರು ಬದುಕುಳಿಯುವ ಸಾಧ್ಯತೆಯೂ ಕಡಿಮೆ ಇರುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲೇ ಬಂದು ಸರಕಾರಿ ವ್ಯವಸ್ಥೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿ''.

 -ಜಿ.ಜಗದೀಶ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News