ಆನ್‌ಲೈನ್ ತರಗತಿಗಳ ಶುಲ್ಕ ಇಳಿಸಿ : ಶಾಲೆಗಳಿಗೆ ಸುಪ್ರೀಂಕೋರ್ಟ್ ಆದೇಶ

Update: 2021-05-04 11:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಅಲೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚುವುದು ಅನಿವಾರ್ಯವಾಗಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳು ​ಆನ್‌ಲೈನ್ ತರಗತಿಗಳಿಗೆ ಮೊರೆ ಹೋಗಿವೆ. ಶಾಲಾ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸುತ್ತಿದ್ದ ಹಲವು ಸೌಲಭ್ಯಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಶುಲ್ಕ ಇಳಿಕೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.

ಸಾಂಕ್ರಾಮಿಕದ ಕಾರಣದಿಂದ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಿಕ್ಷಣ ಸಂಸ್ಥೆಗಳು ಸ್ಪಂದಿಸಬೇಕು ಮತ್ತು ಈ ಕಠಿಣ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ನೆರವಿಗೆ ಮುಂದಾಗಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಎನ್.ಖನ್ವೀಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಅವರನ್ನೊಳಗೊಂಡ ಪೀಠ ಹೇಳಿದೆ.

ವಿದ್ಯಾರ್ಥಿಗಳಿಗೆ ಒದಗಿಸದ ಸೌಲಭ್ಯಗಳಿಗೆ ಶುಲ್ಕ ನೀಡುವಂತೆ ಒತ್ತಾಯಿಸುವುದು, ಲಾಭಕೋರ ಪ್ರವೃತ್ತಿಯಾಗುತ್ತದೆ. ಇದು ನಿಲ್ಲಬೇಕು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಕಾನೂನು ಪ್ರಕಾರ ಶಾಲಾ ಆಡಳಿತ ಮಂಡಳಿಗಳು ತಮ್ಮ ವಿದ್ಯಾರ್ಥಿಗಳಿಗೆ ಒದಗಿಸದ ಸೌಲಭ್ಯಗಳಿಗೆ ಅಥವಾ ವಿದ್ಯಾರ್ಥಿಗಳು ಅನಿವಾರ್ಯ ಕಾರಣದಿಂದ ಸೌಲಭ್ಯ ಪಡೆಯಲು ಸಾಧ್ಯವಾಗದಿದ್ದಾಗ ಅಂಥ ಸೌಲಭ್ಯಗಳಿಗೆ ಶುಲ್ಕ ವಿಧಿಸುವಂತಿಲ್ಲ. ಇವುಗಳ ನಿರ್ವಹಣೆಗೆ ಶುಲ್ಕ ನೀಡುವಂತೆ ಕಡ್ಡಾಯಪಡಿಸುವುದು ಲಾಭಕೋರ ನೀತಿ ಮತ್ತು ವಾಣಿಜ್ಯೀಕರಣವಲ್ಲದೇ ಬೇರೇನೂ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸಂಪೂರ್ಣ ಲಾಕ್‌ಡೌನ್ ಕಾರಣದಿಂದ 2020-21ರ ಅವಧಿಯಲ್ಲಿ ಶಾಲೆಗಳು ತೆರೆಯಲು ಅವಕಾಶವಾಗಲಿಲ್ಲ. ಪರಿಣಾಮವಾಗಿ ಶಾಲಾ ಆಡಳಿತ ಮಂಡಳಿಗಳಿಗೆ ಪೆಟ್ರೋಲ್/ಡೀಸೆಲ್, ವಿದ್ಯುತ್, ನಿರ್ವಹಣೆ ವೆಚ್ಚ, ನೀರಿನ ಶುಲ್ಕ, ಸ್ವಚ್ಛತೆ ವೆಚ್ಚ ಹೀಗೆ ಹಲವು ಖರ್ಚುವೆಚ್ಚಗಳು ಕಡಿಮೆಯಾಗಿವೆ" ಎಂದು ಪೀಠ ಹೇಳಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಬೋಧನಾ ಶುಲ್ಕದಲ್ಲಿ ಶೇಕಡ 30ರಷ್ಟು ಕಡಿತಗೊಳಿಸುವಂತೆ ಸೂಚಿಸಿ ರಾಜಸ್ಥಾನ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸರ್ಕಾರಗಳು ಇಂಥ ಆದೇಶಗಳನ್ನು ಹೊರಡಿಸಬೇಕು ಎಂದು ಕಡ್ಡಾಯವೇನಿಲ್ಲ. ಆದರೆ ಶಾಲೆಗಳು ಶುಲ್ಕವನ್ನು ಇಳಿಸಬೇಕು ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News