ಮಂಗಳೂರು: ಕೋವಿಡ್ ಸೋಂಕು ಭೀತಿ ನಡುವೆ ಲಸಿಕೆಗೆ ಹೆಚ್ಚಿದ ಬೇಡಿಕೆ

Update: 2021-05-04 10:50 GMT

ಮಂಗಳೂರು, ಮೇ 4: ಕೋವಿಡ್ ನಿಯಂತ್ರಣಕ್ಕಾಗಿ ನೀಡಲಾಗುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆಯಲು ಬಯಸುವವರ, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಹಿರಿಯ ನಾಗರಿಕರು ಸೇರಿದಂತೆ ನಗರದ ವೆನ್‌ಲಾಕ್‌ನಲ್ಲಿ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಸದ್ಯ ಕೋವ್ಯಾಕ್ಸಿನ್ ಲಸಿಕೆ ಎಲ್ಲೂ ಲಭ್ಯವಿಲ್ಲ. ವೆನ್‌ಲಾಕ್‌ನ ಆಯುಷ್ ವಿಭಾಗದಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಕೋವ್ಯಾಕ್ಸಿನ್ ಲಭ್ಯವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ. ಮಾತ್ರವಲ್ಲದೆ, 45 ವರ್ಷ ಕೆಳಗಿನವರಿಗೆ ಲಸಿಕೆ ಇಲ್ಲ ಎಂಬ ಬೋರ್ಡನ್ನೂ ಹಾಕಲಾಗಿದೆ. ಕೋವ್ಯಾಕ್ಸಿನ್ ಪೂರೈಕೆ ಸೀಮಿತವಾಗಿದ್ದು, ದ.ಕ. ಜಿಲ್ಲೆಯಲ್ಲಿ ಸದ್ಯ ಸ್ಟಾಕ್ ಇಲ್ಲ. ಮುಂದೆ ಸ್ಟಾಕ್ ಬಂದಾಗ ಲಸಿಕೆ ಹಾಕಿಸುವವರಿಗೆ ಮಾಹಿತಿ ನೀಡಲಾಗುವುದು. ಕೋವಿಶೀಲ್ಡ್ ಕೂಡಾ ದ್ವಿತೀಯ ಡೋಸ್ ಹಾಕಿಸುವವರಿಗೂ ಲಸಿಕೆಗಳ ಲಭ್ಯತೆಯ ಆಧಾರದಲ್ಲಿ ಲಸಿಕಾ ಕೇಂದ್ರಗಳಿಗೆ ಆಗಮಿಸಲು ನಾವೇ ಕರೆ ನೀಡುವುದಾಗಿ ಜಿಲ್ಲಾಧಿಕಾರಿ ಈಗಾಗಲೇ ಹೇಳಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಪ್ರಥಮ ಡೋಸ್ ಹಾಕಿಸಿಕೊಳ್ಳಲು ವೆನ್‌ಲಾಕ್ ಲಸಿಕಾ ಕೇಂದ್ರದತ್ತ ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ನೋಂದಣಿ ಮಾಡಲು ಗೊತ್ತಿಲ್ಲದವರು ಕೇಂದ್ರದತ್ತ ಬಂದು ನಮಗೆ ಲಸಿಕೆ ಕೊಡಿ ಎಂದು ಬೇಡಿಕೆ ಸಲ್ಲಿಸುವುದೂ ಕಂಡು ಬರುತ್ತಿದೆ.

ವೆನ್‌ಲಾಕ್‌ನ ಲಸಿಕಾ ಕೇಂದ್ರದಲ್ಲಿ ಆನ್‌ಲೈನ್ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಸದ್ಯ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯ ಇರುವುದರಿಂದ ದಿನವೊದಕ್ಕೆ ಸುಮಾರು 500ರಷ್ಟು ಮಂದಿಗೆ ಕೇಂದ್ರದಲ್ಲಿ ಲಸಿಕೆಯನ್ನು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ಆನ್‌ಲೈನ್ ಪಡೆದು ಬಂದವರಿಗೆ ಟೋಕನ್ ನೀಡಿ ಲಸಿಕೆ ನೀಡುವ ವ್ಯವಸ್ಥೆಯಿದೆ. ಇದಕ್ಕಾಗಿ ಬೆಳಗ್ಗೆ 7 ಗಂಟೆಯಿಂದಲೇ ಜನ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಇಂದು ಬೆಳಗ್ಗೆ ಸುಮಾರು 10.40ರವರೆಗೆ ಸರ್ವರ್ ಸಮಸ್ಯೆಯಿಂದಾಗಿ ಲಸಿಕೆ ನೀಡುವುದು ತಡವಾಗಿತ್ತು. ಅದಾಗಲೇ ಕಾಯುತ್ತಿದ್ದ ಬಹಳಷ್ಟು ವಯೋವೃದ್ಧರು ಆತಂಕದಿಂದಲೇ ಇಂದು ನಮಗೆ ಲಸಿಕೆ ಸಿಗುವುದಲ್ಲಾ ಎಂದು ಅಲ್ಲಿನ ಸಿಬ್ಬಂದಿಯಲ್ಲಿ ಪದೇ ಪದೇ ಕೇಳುತ್ತಿದ್ದರು. ಆಸ್ಪತ್ರೆಯ ಒಳಗಡೆ ಸುಮಾರು 25ಕ್ಕೂ ಅಧಿಕ ಮಂದಿಗೆ ಒಂದು ಬಾರಿ ಕುಳಿತುಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೊರಗಡೆಯೂ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಲವರು ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದರು.

ಕೋವಿಡ್ 2ನೆ ಅಲೆಯ ಭಯ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದ್ದು, ಲಸಿಕೆಗಾಗಿ ಮೊರೆಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News