ಆಡಳಿತ ಸರಕಾರದ ಬೇಜವಾಬ್ದಾರಿತನವೇ ಕೊರೋನ ಸೋಂಕಿತರ ಸಾವಿಗೆ ಕಾರಣ: ಹಿಂದೂ ಮಹಾಸಭಾ

Update: 2021-05-04 10:54 GMT
ರಾಜೇಶ್ ಪವಿತ್ರನ್

ಸುರತ್ಕಲ್ :  ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ಸಿಜನ್ ಕೊರತೆಯಿಂದ 34  ಜನರು ಮೃತಪಟ್ಟಿದ್ದು, ಆದರೆ ರಾಜ್ಯ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿಡಲು  24 ಮಂದಿ ಎಂದು ಬಿಂಬಿಸುವುದು ಸರಕಾರದ ಮೋಸದ ಆಟ. ಇದು ಈಗ ಜಗ್ಗಜಾಹೀರು ಆಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಹಿತಕರ ಘಟನೆಯ ಸಂಪೂರ್ಣ ಹೊಣೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ವಹಿಸಲೇಬೇಕು ಎಂದು ಆಗ್ರಹಿಸಿದ್ದಾರೆ. ದನಗಳ್ಳರಿಗೆ ಪರಿಹಾರ ಕೊಡಬಹುದಾದರೆ, ಮೃತಪಟ್ಟ ಜನರ ಕುಟುಂಬಗಳಿಗೆ ಇಪ್ಪತ್ತು ಲಕ್ಷ ರೂ. ಪರಿಹಾರ ಈ ಕೂಡಲೇ ನೀಡಬೇಕು ಎಂದಿದ್ದಾರೆ.

ಆಪರೇಷನ್ ಕಮಲಕ್ಕೆ ತೋರಿದ ಆಸಕ್ತಿ ಸೋಂಕಿತರ ಚಿಕಿತ್ಸೆಗೆ ತೋರಿಲ್ಲ ಏಕೆ. ಶಾಸಕರನ್ನು ವಿಮಾನ ಹತ್ತಿಸಿದಂತೆ ಸೋಂಕಿತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಿಲ್ಲ ಏಕೆ. ಶಾಸಕರಿಗೆ ಭಕ್ಷ್ಯ ಭೋಜನ ಕೊಟ್ಟವರು ಸೋಂಕಿತರಿಗೆ ಆಕ್ಸಿಜನ್, ಬೆಡ್  ಕೊಡಲಿಲ್ಲ ಏಕೆ ಎಂದು ಸರಕಾರಕ್ಕೆ ಪ್ರಶ್ನೆಗಳ‌ ಸುರಿಮಳೆ ಗೈದಿದ್ದಾರೆ.

ಮುಂಬರುವ ದಿನಗಳಲ್ಲಿ ಇಂತಹ ಭಂಡ ಸರಕಾರಕ್ಕೆ ರಾಜ್ಯದ ಜನರು ಸೂಕ್ತ ಪಾಠವನ್ನು ಕಲಿಸಲಿದ್ದಾರೆ ಎಂದು ರಾಜೇಶ್ ಪವಿತ್ರನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News