'ಆತ್ಮಹತ್ಯೆಗೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರೇ ಕಾರಣ ಎಂದು ಡೆತ್ ನೋಟ್': ಸೂಕ್ತ ಕ್ರಮಕ್ಕೆ ವಸಂತ ಬಂಗೇರ ಒತ್ತಾಯ

Update: 2021-05-04 11:01 GMT

ಬೆಳ್ತಂಗಡಿ: ಧರ್ಮಸ್ಥಳ ಸೇವಾಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಬರೆದಿಟ್ಟಿದ್ದ ಅಂತಿಮ ಪತ್ರದಂತೆ ಅವರ ಆತ್ಮಹತ್ಯೆಗೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರೇ ಕಾರಣರಾಗಿದ್ದು ಅವರ ವಿರುದ್ಧ  ಕೂಡಲೇ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಒತ್ತಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.

ರವೀಂದ್ರ ಅವರು ಆತ್ಮಹತ್ಯೆಯ ಮೊದಲು ಬರೆದಿರುವ ಪತ್ರವನ್ನು ಹಾಗೂ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಬರೆದಿರುವ ಪತ್ರಗಳನ್ನು ಬಿಡುಗಡೆ ಮಾಡಿದ ಬಂಗೇರ ಅವರು ಪತ್ರದಲ್ಲಿ ಅವರು ತಮಗೆ ಕಿರುಕುಳ ನೀಡಿರುವ ಜಯರಾಮ ಬಂಢಾರಿ ಹಾಗೂ ರಘುಚಂದ್ರ ಭಟ್ ಅವರ ಹೆಸರನ್ನು ಬರೆದಿದ್ದು ಅವರು ನೀಡಿದ ಕಿರುಕುಳದಿಂದಲೇ ರವೀಂದ್ರನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಸಂತ ಬಂಗೇರ  ಆರೋಪಿಸಿದರು.

ಬಿಜೆಪಿ ನೇತೃತ್ವದ ಆಡಳಿತ ಮಂಡಳಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಆಡಳಿತ ಮಂಡಳಿಯವರು ಹೇಳಿದ್ದಕ್ಕೆಲ್ಲ ಒಪ್ಪದಿದ್ದ ಕಾರಣಕ್ಕೆ ರವೀಂದ್ರನ್ ಅವರನ್ನು ಬಲವಂತವಾಗಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿ ನಡೆದಿರುವ ಎಲ್ಲ ವಿಚಾರಗಳ ಬಗ್ಗೆಗೂ ತನಿಖೆಗೆಗೆ ಸಹಕಾರ ಇಲಾಖೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. 

ಪೋಲೀಸರು ಕೂಡಲೆ ರಘುರಾಮ ಭಟ್ ಹಾಗೂ ಜಯರಾಮ ಬಂಢಾರಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸ ಬೇಕು ಎಂದು ಒತ್ತಾಯಿಸಿದರು. ರವೀಂದ್ರನ್ ಅವರ ಪತ್ನಿಯೊಂದಿಗೆ ಮಾತುಕತೆ ನಡೆಸಿದ್ದು ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಂಜನ್ ಗೌಡ, ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಮುಖಂಡರುಗಳಾದ ಗ್ರೇಸಿಯನ್ ವೇಗಸ್, ಮನೋಹರ್ ಕುಮಾರ್, ಜನತಾದಳದ ಮುಖಂಡೆ ಸಿಂಧೂ ದೇವಿ, ಸಿಪಿಐಎಂ ಮುಖಂಡ ಶೇಖರ ಲಾಯಿಲ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಮುಖಂಡ ಬಿ.ಕೆ ವಸಂತ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News