ಆಕ್ಸಿಜನ್ ಬಗ್ಗೆ ರಾಜ್ಯ, ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಲಿ: ಶಾಸಕ ಯು.ಟಿ. ಖಾದರ್

Update: 2021-05-04 12:30 GMT

ಮಂಗಳೂರು, ಮೇ 4: ಆಕ್ಸಿಜನ್ ಸಂಬಂಧಿಸಿ ರಾಜ್ಯ ಸರಕಾರ ಹಾಗೂ ಪ್ರತಿ ಜಿಲ್ಲಾಡಳಿತದ ಶ್ವೇತಪತ್ರ ಹೊರಡಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ನಗರದ ವೆನ್‌ಲಾಕ್ ಆಯುಷ್ ವಿಭಾಗಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರ ಜತೆ ಭೇಟಿ ನೀಡಿ ಅಲ್ಲಿ ವೆನ್‌ಲಾಕ್ ಅಧೀಕ್ಷಕ ಡಾ. ಸದಾಶಿವ ಶ್ಯಾನುಭಾಗ್ ಹಾಗೂ ಇತರ ಅಧಿಕಾರಿಗಳ ಜತೆ ಮಾತನಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಹಿಂದಿನ ಬೇಡಿಕೆಗಿಂತ ಪ್ರಸ್ತುತ 3 ಪಟ್ಟು ಬೇಡಿಕೆ ಹೆಚ್ಚಿದೆ. ಹಾಗಾಗಿ ಎಲ್ಲಾ ಆಸ್ಪತ್ರೆಗಳ ವೆಂಟಿಲೇಟರ್, ಐಸಿಯುಗಳು ಸಂಪೂರ್ಣವಾಗಿ ಉಪಯೋಗ ಆದಾಗ ಎಷ್ಟು ಆಕ್ಸಿಜನ್ ಅಗತ್ಯವಿದೆ. ಪ್ರಸ್ತುತ ದಿನನಿತ್ಯ ಎಷ್ಟು ಪೂರೈಕೆ ಆಗುತ್ತಿದೆ ಎಂಬ ಬಗೆ ಶ್ವೇತ ಪತ್ರವನ್ನು ಬಿಡುಗಡೆ ಗೊಳಿಸವ ಮೂಲಕ ಅನುಮಾನವನ್ನು ನಿವಾರಿಸಬೇಕು. ಎಲ್ಲಿಂದ ಎಷ್ಟು ಆಕ್ಸಿಜನ್ ಬರುತ್ತಿದೆ, ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಶಾಸಕರಿಗೂ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ರಾಜ್ಯ ಸರಕಾರ ಶ್ವೇತ ಪತ್ರದ ಮೂಲಕ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಹೇಳಿದರು.

ಒಂದು ವಾರದ ಹಿಂದೆಯೇ ಪ್ರತಿಪಕ್ಷದ ನಾಯಕರಾದ ಸಿದ್ಧರಾಮಯ್ಯ ಹಾಗೂ ಡಿಕೆಶಿಯವರು ಸರಕಾರ ಗಮನ ಸೆಳೆದಾಗ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ನಿನ್ನೆ ಚಾಮರಾಜನಗರ ದುರಂತಕ್ಕೆ ಯಾರು ಕಾರಣ ಎಂಬುದನ್ನು ಸರಕಾರ ತಿಳಿಸಬೇಕು. ಇಂತಹ ಸಾವನ್ನು ಯಾರಿಂದಲೂ ಸಹಿಸಲಾಗದು. ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ಸ್ಪಷ್ಟತೆ ಅಗತ್ಯ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ವೆಂಟಿಲೇಟರ್, ಆಕ್ಸಿಜನ್ ಹಾಗೂ ಹೈಫ್ಲೋ ಆಕ್ಸಿಜನ್ ಎಲ್ಲಾ ಸೇರಿ ಏಕಕಾಲದಲ್ಲಿ ಉಪಯೋಗವಾದಾಗ ಎಷ್ಟು ಆಕ್ಸಿಜನ್ ಅಗತ್ಯವಿದೆ ಮತ್ತು ಎಷ್ಟು ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ನನ್ನ ಮಾಹಿತಿಯ ಪ್ರಕಾರ ಜಿಂದಾಲ್ ಕಂಪನಿಯಿಂದ ಶೇ. 80ರಷ್ಟು ಹಾಗೂ ಪಾಲ್ಘಾಟ್‌ನಿಂದ ಶೇ. 20ರಷ್ಟು ಲಿಕ್ವಿಡ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇರಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ, ಅಲ್ಲಿನ ಆಕ್ಸಿಜನ್ ಕೇಂದ್ರಗಳನ್ನು ಕೇರಳ ಸರಕಾರ ಸ್ವಾಧೀನ ಪಡಿಸಿಕೊಂಡರೆ ನಮಗೆ ಪೂರೈಯಲ್ಲಿ ವ್ಯತ್ಯಯ ಉಂಟಾಗಲಿದೆ. ಆಗ ಪರ್ಯಾಯ ವ್ಯವಸ್ಥೆ ಏನೆಂಬ ಬಗ್ಗೆ ಸರಕಾರ ತಿಳಿಸಬೇಕು. ರಾಜ್ಯ ಸರಕಾರ ಕೇರಳ ಸರಕಾರದ ಜತೆ ಮಾತನಾಡಿಕೊಂಡು ಮಂಗಳೂರಿಗೆ ಬರುವ ಆಕ್ಸಿಜನ್ ಕಡಿತಗೊಳಿಸದಂತೆ ಅಲ್ಲಿನ ಕಂಪನಿಗಳಿಗೆ ಕೇರಳ ಸರಕಾರ ಆದೇಶ ಮಾಡುವಂತೆ ಮನವಿ ಮಾಡಬೇಕಾಗಿದೆ. ಜಿಂದಾಲ್‌ನಿಂದ ಹೆಚ್ಚುವರಿ ಪೂರೈಕೆ ಮಾಡುವಂತೆ ಸೂಚನೆ ನೀಡಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರಕಾರದ ಮೂಲಕ ಜಿಂದಾಲ್ ಕಂಪನಿಯಿಂದ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಬೇಕಾಗಿದೆ. ತಮಿಳುನಾಡಿನ ರಾಜಕೀಯ ಶಕ್ತಿಗಳು ಕೇಂದ್ರದ ಮೂಲಕ ಒತ್ತಡ ಹೇರಿ ಜಿಂದಾಲ್ ಮೂಲಕ ತಮ್ಮ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಸಾಧ್ಯ ಆಗುವುದಾದರೆ ನಮ್ಮ ರಾಜ್ಯಕ್ಕೂ ಅದು ಆಗಬೇಕು. ನಮ್ಮ ಸಂಸದರು ಮತ್ತು ಸರಕಾರ ಈ ಬಗ್ಗೆ ಒತ್ತಡ ಹೇರಬೇಕು ಎಂದು ಅವರು ಹೇಳಿದರು.

ತಾಲೂಕು ಮಟ್ಟದಲ್ಲಿ 15 ವೆಂಟಿಲೇಟರ್‌ಗಳು ಉಪಯೋಗವಿಲ್ಲವಾಗಿದ್ದು, ಅವುಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಉಪಯೋಗಿಸಬೇಕು ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯ ವೆನ್‌ಲಾಕ್ ಆಸ್ಪತ್ರೆಯ ಕೋವಿಡ್ ವಿಭಾಗದ ವೆಂಟಿಲೇಟರ್, ಐಸಿಯು ಸಹಿತ ಎಲ್ಲಾ ಬೆಡ್‌ಗಳು ಕಾರ್ಯಾಚರಿಸಿದಾಗ ದಿನವೊಂದಕ್ಕೆ 2.5 ಕಿ.ಲೀ. ಆಕ್ಸಿಜನ್ ಅಗತ್ಯ. ವೆನ್‌ಲಾಕ್‌ನಲ್ಲಿ 6 ಕಿ.ಲೀ. ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದ್ದು, ಎರಡು ದಿನಗಳಿಗೊಮ್ಮೆ ಇದನ್ನು ತುಂಬಿಸಲಾಗುತ್ತಿದೆ.

- ಡಾ. ಸದಾಶಿವ ಶ್ಯಾನುಬೋಗ್, ಡಿಎಂಒ, ವೆನ್‌ಲಾಕ್ ಆಸ್ಪತ್ರೆ.

ವೆನ್‌ಲಾಕ್‌ಗೆ ಭೇಟಿ ನೀಡಿದ ತಂಡದಲ್ಲಿ ಮುಖಂಡರಾದ ಐವನ್ ಡಿಸೋಜಾ, ಜೆ.ಆರ್. ಲೋಬೋ, ಮಿಥುನ್ ರೈ, ವಿನಯ್‌ರಾಜ್, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News