×
Ad

ಸೆಂಟ್ರಲ್ ವಿಸ್ತಾ ಯೋಜನೆಯ ಅಮಾನತು ಕೋರಿಕೆಯ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್

Update: 2021-05-04 20:40 IST

ಹೊಸದಿಲ್ಲಿ,ಮೇ 4: ಕೋವಿಡ್-19 ಸಾಂಕ್ರಾಮಿಕವು ಉತ್ತುಂಗದಲ್ಲಿರುವ ಈ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಯೋಜನೆಯಲ್ಲಿ ತೊಡಗಿಕೊಂಡಿರುವವರ ಜೀವಗಳನ್ನು ರಕ್ಷಿಸಲು ದಿಲ್ಲಿಯ ಸೆಂಟ್ರಲ್ ವಿಸ್ತಾ ಯೋಜನೆಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯವು ಮುಂದೂಡಿದೆ.

ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ತೊಡಗಿಕೊಂಡಿರುವ ವಾಹನಗಳಿಗೆ ಕರ್ಫ್ಯೂ ಮತ್ತು ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳ ವರ್ಗದಡಿ ಸಂಚಾರ ಪಾಸ್‌ಗಳನ್ನು ನೀಡುವ ಹೊಸದಿಲ್ಲಿ ಡಿಸಿಪಿಯ ನಿರ್ಧಾರವನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಸೆಂಟ್ರಲ್ ವಿಸ್ತಾ ಪುನರ್‌ಅಭಿವೃದ್ಧಿ ಯೋಜನೆ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಾನು ಅಧ್ಯಯನ ಮಾಡಬೇಕಿದೆ ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಜಸ್ಮೀತ್ ಸಿಂಗ್ ಅವರ ಪೀಠವು ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ನಿಗದಿಗೊಳಿಸಿತು. ಇದಕ್ಕೂ ಮುನ್ನ,ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಯೋಜನೆಗೆ ಅನುಮತಿ ನೀಡಿದೆ ಎಂದು ತಿಳಿಸಿದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ ಶರ್ಮಾ ಅವರು ಅರ್ಜಿಯನ್ನು ವಿರೋಧಿಸಿದರು.

ನೂತನ ಸಂಸತ್ ಕಟ್ಟಡ ಮತ್ತು ಸಾಮೂಹಿಕ ಕೇಂದ್ರೀಯ ಸಚಿವಾಲಯ ನಿರ್ಮಾಣಗಳನ್ನೊಳಗೊಂಡಿರುವ ಸೆಂಟ್ರಲ್ ವಿಸ್ತಾ ಯೋಜನೆಗೆ ಸರ್ವೋಚ್ಚ ನ್ಯಾಯಾಲಯವು ಈ ವರ್ಷದ ಜನವರಿಯಲ್ಲಿ 2:1 ಬಹುಮತದಿಂದ ಹಸಿರು ನಿಶಾನೆ ತೋರಿಸಿತ್ತು. ದಿಲ್ಲಿಯಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾವು ನಿರ್ಮಾಣ ಕಾರ್ಯದ ಮಧ್ಯಂತರ ಅಮಾನತನ್ನು ಮಾತ್ರ ಕೋರುತ್ತಿರುವುದಾಗಿ ತಿಳಿಸಿದ ಅರ್ಜಿದಾರರ ಪರ ಹಿರಿಯ ಕೀಲ ಸಿದ್ಧಾರ್ಥ ಲೂಥ್ರಾ ಅವರು,ನಿರ್ಮಾಣ ಚಟುವಟಿಕೆಯು ಅಗತ್ಯ ಸೇವೆಗಳ ವ್ಯಾಪ್ತಿಗೊಳಪಡುವುದಿಲ್ಲ ಮತ್ತು ಕಾರ್ಮಿಕರನ್ನು ಅಪಾಯಕ್ಕೆ ತಳ್ಳುತ್ತದೆ. ನಿರ್ಮಾಣ ಕಾಮಗಾರಿಯು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶಗಳ ಉಲ್ಲಂಘನೆಯೂ ಆಗುತ್ತದೆ ಎಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News