ಕೋವಿಡ್ ಕರ್ತವ್ಯಕ್ಕಾಗಿ ಅಜ್ಜಿಯ ಅಂತ್ಯಕ್ರಿಯೆಗೆ ತೆರಳದ ಏಮ್ಸ್ ನರ್ಸಿಂಗ್ ಅಧಿಕಾರಿ ರಾಖಿ ಜಾನ್
ಹೊಸದಿಲ್ಲಿ: ತನಗೆ ತಾಯಿಯಂತಿದ್ದ ಅಜ್ಜಿ ಕೋವಿಡ್ ನಿಂದ ಮೃತಪಟ್ಟಾಗ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತನ್ನ ರಾಜ್ಯಕ್ಕೆ ತೆರಳದೆ ದಿಲ್ಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಆರೈಕೆಯಲ್ಲೇ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ನರ್ಸಿಂಗ್ ಅಧಿಕಾರಿ ರಾಖಿ ಜಾನ್ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೇರಳದಲ್ಲಿ ತನ್ನ 78ರ ವಯಸ್ಸಿನ ಅಜ್ಜಿಯ ಅಂತ್ಯಕ್ರಿಯೆಗಿಂತ ತಾನು ನೋಡಿಕೊಳ್ಳುತ್ತಿರುವ ರೋಗಿಗಳಿಗೆ ತನ್ನ ಉಪಸ್ಥಿತಿಯು ಹೆಚ್ಚು ಅಗತ್ಯವೆಂದು ಜಾನ್ ನಿರ್ಧರಿಸಿದರು ಎಂದು indianexpress.com ವರದಿ ಮಾಡಿದೆ.
“ನನಗೆ ಆ ದಿನ ತುಂಬಾ ನೋವಾಗಿತ್ತು. ನನ್ನ ಅಜ್ಜಿ ನನ್ನನ್ನು ತನ್ನ ಮಗಳಂತೆ ಬೆಳೆಸಿದರು. ನಾನು ಒಂದು ವರ್ಷದ ಮಗುವಾಗಿದ್ದಾಗ ನನ್ನ ತಾಯಿ ತೀರಿಕೊಂಡರು. ಹೀಗಾಗಿ ನನ್ನ ಶಿಕ್ಷಣ ಸಹಿತ ಎಲ್ಲವನ್ನು ಅಜ್ಜಿಯೇ ನೋಡಿಕೊಂಡಿದ್ದರು. ಅವರು ನನ್ನ ತಾಯಿಯಾಗಿದ್ದರು. ಆದರೆ ಕೊರೋನ ಕಾಯಿಲೆಯು ತನ್ನ ಪ್ರೀತಿಪಾತ್ರರನ್ನು ಕೊನೆಯ ಬಾರಿ ನೋಡಲು ಅವಕಾಶ ನೀಡುವುದಿಲ್ಲ” ಎಂದು ರಾಖಿ ಜಾನ್ ಹೇಳಿದ್ದಾರೆ.
“ನನ್ನ ವಾರ್ಡ್‌ನಲ್ಲಿ ರೋಗಿಗಳನ್ನು ನೋಡುವಾಗಲೆಲ್ಲಾ ನನ್ನ ಅಮ್ಮನ ಬಗ್ಗೆ ಯೋಚಿಸುತ್ತೇನೆ. ಇಲ್ಲಿರುವ ಇತರ ಸಿಬ್ಬಂದಿಗಳನ್ನು ಒಳಗೊಂಡಂತೆ ಅನೇಕ ಜನರು ನನ್ನಂತೆಯೇ ಇದ್ದಾರೆ. ಆರೋಗ್ಯ ಕಾರ್ಯಕರ್ತರು ತಮ್ಮ ರಜೆ ತೆಗೆದುಕೊಳ್ಳಲು ಆರಂಭಿಸಿದರೆ, ರೋಗಿಗಳನ್ನು ಯಾರು ನೋಡಿಕೊಳ್ಳುತ್ತಾರೆ? ನಮ್ಮಲ್ಲಿ ಅನೇಕರು, ದಾದಿಯರು ಮತ್ತು ವೈದ್ಯರು ಸೋಂಕಿಗೆ ಒಳಗಾಗುತ್ತಿದ್ದಾರೆ, ಆದರೆ ನೈರ್ಮಲ್ಯ ಕಾರ್ಮಿಕರಿಂದ ಹಿಡಿದು ಸೆಕ್ಯುರಿಟಿ ಗಾರ್ಡ್‌ಗಳವರೆಗಿನ ಎಲ್ಲರೂ ನಮಗೆ ಸಹಾಯ ಮಾಡಲು ಬಹಳ ಶ್ರಮಿಸುತ್ತಿದ್ದಾರೆ. ಹಾಗಾಗಿ ಜನರು ಮಾಸ್ಕ್ ಗಳನ್ನು ಧರಿಸಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು” ಎಂದು 2014 ರಿಂದ ಏಮ್ಸ್ ನಲ್ಲಿ ಕೆಲಸ ಮಾಡುತ್ತಿರುವ ರಾಖಿ ಜಾನ್ ಹೇಳಿದ್ದಾರೆ.