ಎಲ್ಗರ್ ಪರಿಷದ್ ಪ್ರಕರಣ: ಎನ್‌ಐಎಗೆ ಹೈಕೋರ್ಟ್ ನೋಟಿಸ್

Update: 2021-05-04 17:41 GMT

ಮುಂಬೈ, ಮೇ 4: ಎಲ್ಗರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ 2020ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಟ್ಯಾನ್ ಸ್ವಾಮಿ ವೈದ್ಯಕೀಯ ನೆಲೆಯಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಶ್ರವಣ ಶಕ್ತಿ ನಷ್ಟವಾಗಿದೆ. ಈಗ ಇರುವ ಕೊರೋನ ಸೋಂಕಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರಿಗೆ ತಾತ್ಕಾಲಿಕ ಜಾಮೀನು ನೀಡಿ ಬಿಡುಗಡೆಗೊಳಿಸಬೇಕು ಎಂದು ಸ್ವಾಮಿಯವರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಹಾಗಿದ್ದರೆ ಸ್ವಾಮಿ ಜಾಮೀನು ಪಡೆಯಲು ಅರ್ಹರು ಎಂದು ಹೇಳಿ , ಜಾಮೀನು ಅರ್ಜಿಗೆ ಪ್ರತಿಕ್ರಿಯಿಸುವಂತೆ ಎನ್‌ಐಎಗೆ ನೋಟಿಸ್ ನೀಡಿತು. ಅಲ್ಲದೆ ಸ್ವಾಮಿಯವರ ಆರೋಗ್ಯ ಪರಿಸ್ಥಿತಿ ಬಗ್ಗೆ ಮೇ 15ರೊಳಗೆ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆಗೆ ಸೂಚಿಸಿತು.

 ತಲೋಜಾ ಜೈಲಿನಲ್ಲಿರುವ 84 ವರ್ಷದ ಸ್ವಾಮಿ ವಿರುದ್ಧ ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎನ್‌ಐಎ ಕೋರ್ಟ್ ತಿರಸ್ಕರಿಸಿದ ಬಳಿಕ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News