ಬಹರೈನ್ ನಿಂದ ಮಂಗಳೂರು ತಲುಪಿದ 40 ಮೆಟ್ರಿಕ್ ಟನ್ ಆಮ್ಲಜನಕ

Update: 2021-05-05 12:02 GMT

ಮಂಗಳೂರು, ಮೇ 5: ಕೋವಿಡ್ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಸಹಾಯ ಹಸ್ತವಾಗಿ ಬಹರೈನ್‌ ನಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಮ್ಲಜನಕ ಇಂದು ತಲುಪಿದೆ. 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಮಂಗಳೂರು ನವ ಮಂಗಳೂರು ಬಂದರಿಗೆ ಇಂದು ಮಧ್ಯಾಹ್ನ ತಲುಪಿದೆ.

ಬಹರೈನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್‌ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಭಾರತದ ನೌಕಾ ಸೇನಾ ಹಡಗು ಐಎನ್‌ಎಸ್ ತಲ್ವಾರ್ ಮಂಗಳೂರು ಬಂದರಿಗೆ ತಲುಪಿದ್ದು, ಹಡಗಿನಿಂದ ಎನ್‌ಎಂಪಿಟಿಯಿಂದ ಆಕ್ಸಿಜನ್ ತುಂಬಿದ ಕ್ರಯೋಜೆನಿಕ್ ಕಂಟೇನರ್‌ಗಳನ್ನು ಅಲ್‌ಲೋಡ್ ಮಾಡಲಾಯಿತು.

20 ಮೆಟ್ರಿಕ್ ಟನ್‌ಗಳ ಎರಡು ಪ್ರತ್ಯೇಕ ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ತುಂಬಿರುವ ಆಕ್ಸಿಜನನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರಕಾರ ಎನ್‌ಎಂಪಿಟಿಗೆ ಸೂಚನೆ ನೀಡಿದೆ. ಭಾರತದಲ್ಲಿನ ಕೋವಿಡ್ ಸಂಕಷ್ಟದಿಂದ ಪಾರಾಗಲು ಕಿಂಗ್‌ಡಮ್ ಆಫ್ ಬಹರೈನ್‌ ಸರಕಾರವು ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಈ ಆಕ್ಸಿಜನ್ ಕೊಡುಗೆಯನ್ನು ರವಾನಿಸಿದೆ ಎಂದು ಎನ್‌ಎಂಪಿಟಿ ತಿಳಿಸಿದೆ.

ಭಾರತದ ನೌಕಾಪಡೆಯ ಐಎನ್‌ಎಸ್ ತಲ್ವಾರ್ ಹಡಗು ರಷ್ಯಾ ನಿರ್ಮಿತವಾಗಿದ್ದು, 2003ರ ಜೂನ್ 18ರಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ನೌಕಾಪಡೆಯು ತನ್ನ ಮುಂಚೂಣಿಯಲ್ಲಿರುವ ಹಲವು ಯುದ್ಧ ನೌಕೆಗಳನ್ನು ಈಗಾಗಲೇ ಕೋವಿಡ್ ಮಾನವೀಯ ಕಾರ್ಯಾಚರಣೆಗೆ ರವಾನಿಸಿದೆ.

ಎನ್‌ಎಂಪಿಟಿ ಬಂದರ್‌ನಲ್ಲಿ ಅನ್‌ಲೋಡ್ ಆದ ಆಕ್ಸಿಜನ್‌ನಿಂದ ಕೂಡಿದ ಕ್ರಯೊಜೆನಿಕ್ ಕಂಟೇನರ್‌ಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹಾಗೂ ತಂಡ ಸ್ವೀಕರಿಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿದೆ.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ರೆಡ್‌ಕ್ರಾಸ್‌ನ ಯತೀಶ್ ಬೈಕಂಪಾಡಿ ಈ ಸಂದರ್ಭ ಉಪಸ್ಥಿತರಿದ್ದರು.

20 ಮೆಟ್ರಿಕ್ ಟನ್ ದ.ಕ. ಉಡುಪಿಗೆ ಬಳಕೆಗೆ ಆದೇಶ

ಬಹರೈನ್‌ ನಿಂದ ಇಂದು ಎನ್‌ಎಂಪಿಟಿಗೆ ಆಗಮಿಸಿರುವ ಆಕ್ಸಿಜನ್‌ನ ಒಂದು ಕ್ರಯೊಜೆನಿಕ್ ಕಂಟೇನರ್ (20 ಮೆಟ್ರಿಕ್ ಟನ್) ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಉಪಯೋಗಿಸಲು ಸರಕಾರ ಅನುಮತಿಸಿದೆ. 20 ಮೆಟ್ರಿಕ್ ಟನ್‌ನ ಮತ್ತೊಂದು ಕ್ರಯೊಜೆನಿಕ್ ಕಂಟೇನರ್ ಬೆಂಗಳೂರಿಗೆ ಸಾಗಿಸಲಾಗುವುದು. ಬಹರೈನ್‌ ನಿಂದ ಬಂದ ಈ ಕಂಟೇನರ್‌ನ್ನು ತೆರೆಯಲು ತಾಂತ್ರಿಕ ತೊಂದರೆಯಾದಲ್ಲಿ ಅದನ್ನು ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲನಿನ್ನೆ ರಾತ್ರಿಯಿಂದ ಇಂದು ಮುಂಜಾನೆಯವರೆಗೆ ದ.ಕ. ಜಿಲ್ಲೆಗೆ ಒಟ್ಟು 22 ಟನ್ ಆಕ್ಸಿಜನ್ ಪೂರೈಕೆಯಾಗಿದೆ. ಆಕ್ಸಿಜನ್ ತರಿಸುವ ಪ್ರಕ್ರಿಯೆ ಸಾಮಾನ್ಯವಾಗಿ ಎರಡು ದಿನಕ್ಕೊಮ್ಮೆ ನಿಯಮಿತವಾಗಿ ನಡೆಯುತ್ತದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಡಾ. ರಾಜೇಂದ್ರ ಕೆ.ವಿ. ‘ವಾತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News