ಸರಕಾರದಿಂದ ಪೂರೈಕೆ ವಿಳಂಬ, ಒಂದು ವಾರ ಲಸಿಕಾ ಕಾರ್ಯ ಸ್ಥಗಿತ: ನೋಡೆಲ್ ಅಧಿಕಾರಿ ಡಾ.ಎಂ.ಜಿ.ರಾಮ

Update: 2021-05-05 13:53 GMT

ಉಡುಪಿ, ಮೇ 5: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನ ಲಸಿಕೆ ಪಡೆಯುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದರೆ ಸರಕಾರದಿಂದ ಜಿಲ್ಲೆಗೆ ಲಸಿಕೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಸದ್ಯ ಒಂದು ವಾರಗಳ ಕಾಲ ಜಿಲ್ಲೆಯ ಎಲ್ಲ ಕೇಂದ್ರ ಗಳಲ್ಲಿ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಲಸಿಕಾ ನೋಡೆಲ್ ಅಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 13, ಕಾಪು- 10, ಕುಂದಾಪುರ- 16, ಬೈಂದೂರು- 15 ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 19 ಸೇರಿದಂತೆ ಒಟ್ಟು 74 ಸರಕಾರಿ ಕೊರೋನ ಲಸಿಕಾ ಕೇಂದ್ರಗಳಿವೆ. ಸದ್ಯ ಖಾಸಗಿ ಆಸ್ಪತ್ರೆ ಗಳಿಗೆ ಲಸಿಕೆ ನೀಡುವ ಕಾರ್ಯ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಬೇಕಾದರೆ ಅವರೇ ಲಸಿಕೆಯನ್ನು ಖರೀದಿಸಬೇಕಾಗಿದೆ. ಈವರೆಗೆ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರಲ್ಲಿ 22571ಮಂದಿಗೆ ಮೊದಲ ಡೋಸ್, 17963 ಮಂದಿಗೆ ಎರಡನೇ ಡೋಸ್, ಮುಂಚೂಣಿ ಕಾರ್ಯಕರ್ತರಲ್ಲಿ 4591 ಮಂದಿಗೆ ಮೊದಲ ಡೋಸ್, 3055 ಮಂದಿಗೆ ಎರಡನೇ ಡೋಸ್, 45 ವರ್ಷ ಮೇಲ್ಪಟ್ಟವರಲ್ಲಿ 167401 ಮಂದಿಗೆ ಮೊದಲ ಡೋಸ್, 34987 ಮಂದಿಗೆ ಎರಡನೇ ಡೋಸ್ ಈವರೆಗೆ ನೀಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 194563 ಮಂದಿಗೆ ಮೊದಲ ಡೋಸ್ ಮತ್ತು 56005 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.

ಕಳೆದ ಕೆಲವು ದಿನಗಳಿಂದ ಸೀಮಿತವಾಗಿ ಲಸಿಕೆ ಪೂರೈಕೆಯಾಗುತ್ತಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎರಡನೇ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುತ್ತಿದೆ. ಇದೀಗ ಲಸಿಕೆ ಸಾಕಷ್ಟು ಕೊರತೆ ಎದುರಾಗಿರುವುದರಿಂದ ಕೋವಿಶೀಲ್ಡ್ ಮೊದಲ ಡೋಸ್ ಪಡೆದು ಎಂಟು ವಾರ ದಾಟಿವರನ್ನು ಗುರುತಿಸಿ ಎರಡನೇ ಡೋಸ್ ನೀಡಲಾಗುತ್ತಿದೆ. ಮೇ 4ರಂದು ಜಿಲ್ಲೆಗೆ ಆಗಮಿಸಿದ 2000 ಡೋಸ್‌ನ್ನು ತಾಲೂಕು ವಾರು ಹಂಚಿಕೆ ಮಾಡಿ ಅಲ್ಲಿಂದ ಆಯಾ ಕೇಂದ್ರಗಳಿಗೆ ವಿತರಿಸಲಾಗಿದೆ. ಅದರಂತೆ ಈಗಾಗಲೇ ಪಟ್ಟಿ ಮಾಡಿರುವ 947 ಮಂದಿಗೆ ಇಂದು ಲಸಿಕೆ ನೀಡಲಾಗಿದೆ. ಅದು ಬಿಟ್ಟು ಇಂದು ಜಿಲ್ಲಾಸ್ಪತ್ರೆ ಸೇರಿದಂತೆ ಯಾವುದೇ ಆಸ್ಪತ್ರೆಗಳ ಕೇಂದ್ರಗಳಿಗೆ ಲಸಿಕೆ ವಿತರಿಸಿಲ್ಲ ಎಂದು ಲಸಿಕಾ ನೋಡೆಲ್ ಅಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ.

ಜಾಗದ ಕೊರತೆ ಹಾಗೂ ಕೊರೋನ ಪ್ರಕರಣದ ಹೆಚ್ಚಳದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಯಿಂದ ಸಮೀಪದ ಸೈಂಟ್ ಸಿಸಿಲಿಸ್ ಶಾಲೆಗೆ ಸ್ಥಳಾಂತರಿಸಿ ರುವ ಲಸಿಕಾ ಕೇಂದ್ರದಲ್ಲಿ ಇಂದು ಕೂಡ ಯಾವುದೇ ಲಸಿಕೆ ನೀಡಿಲ್ಲ. ಬೆಳಗ್ಗೆ 7ಗಂಟೆಯಿಂದ ನೂರಾರು ಸಂಖ್ಯೆಯಲ್ಲಿ ಜನ ಲಸಿಕೆ ಪಡೆಯಲು ಆಗಮಿ ಸಿದ್ದು, ಬಳಿಕ ಅಧಿಕಾರಿಗಳು ಲಸಿಕೆ ಬಾರದ ಕುರಿತು ಮಾಹಿತಿ ನೀಡಿದ್ದಾರೆ.

ಮುಂದೆ ಲಸಿಕೆ ಬಂದರೆ ಆಶಾ ಕಾರ್ಯಕರ್ತರು ಮೊಬೈಲ್ ಸಂದೇಶ ಕಳುಹಿ ಸುತ್ತಾರೆ ಎಂದು ಹೇಳಿ ವಾಪಾಸ್ಸು ಕಳುಹಿಸಲಾಗಿದೆ. ಅದೇ ರೀತಿ ಲಸಿಕೆ ಗಾಗಿ ಜಿಲ್ಲಾಸ್ಪತ್ರೆಗೂ ನೂರಾರು ಆಗಮಿಸಿರುವ ಬಗ್ಗೆ ವರದಿಯಾಗಿದೆ. ಎಲ್ಲರೂ ಲಸಿಕೆ ಸಿಗದೆ ಹಿಂದಕ್ಕೆ ಹೋಗಿದ್ದಾರೆ. ಇವರಲ್ಲಿ ಬಹುತೇಕರು ಹಿರಿಯ ನಾಗರಿಕರು ಆಗಿದ್ದಾರೆ ಎಂದು ತಿಳಿದುಬಂದಿದೆ.

‘ಸದ್ಯ ಒಂದು ವಾರಗಳ ಕಾಲ ಲಸಿಕೆ ಜಿಲ್ಲೆಗೆ ಬರುವುದಿಲ್ಲ ಎಂಬ ಮಾಹಿತಿ ದೊರೆತಿದೆ. ಆದುದರಿಂದ ಸದ್ಯ ಜನರು ಲಸಿಕಾ ಕೇಂದ್ರಗಳಿಗೆ ಬರುವುದು ಬೇಡ. ಮುಂದೆ ಲಸಿಕೆ ಬಂದರೆ ಮಾಹಿತಿ ನೀಡಲಾಗುವುದು. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು ಆರು ವಾರ ದಾಟಿದ 287 ಮಂದಿ ಯನ್ನು ಪಟ್ಟಿ ಮಾಡಲಾಗಿದೆ. ಎರಡು ದಿನಗಳಲ್ಲಿ ಕೋವ್ಯಾಕ್ಸಿನ್ ಜಿಲ್ಲೆಗೆ ಪೂರೈಕೆ ಆಗುವ ಸಾಧ್ಯತೆಗಳಿವೆ.
-ಡಾ.ಎಂ.ಜಿ.ರಾಮ, ಕೋವಿಡ್ ಲಸಿಕಾ ನೋಡೆಲ್ ಅಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News