ದ.ಕ.ಜಿಲ್ಲೆ: ಕೋವಿಡ್ ಗೆ ಮತ್ತೆ ನಾಲ್ಕು ಮಂದಿ ಬಲಿ; 1,529 ಮಂದಿಗೆ ಕೊರೋನ ಪಾಸಿಟಿವ್

Update: 2021-05-05 15:40 GMT

ಮಂಗಳೂರು, ಮೇ 5: ದ.ಕ. ಜಿಲ್ಲೆಯಲ್ಲಿ ಕೊರೋನ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬುಧವಾರ ನಾಲ್ಕು ಮಂದಿ ಕೋವಿಡ್‌ಗೆ ಬಲಿಯಾದರೆ, 1,529 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಬುಧವಾರ ಬಲಿಯಾದವರರೆಲ್ಲರೂ ನಗರ ನಿವಾಸಿಗಳಾಗಿದ್ದು, ಅದರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ 608 ಮಂದಿ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 50,345 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 40,246 ಮಂದಿ ಗುಣಮುಖರಾಗಿದ್ದಾರೆ. ಇದೀಗ 9331 ಮಂದಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 768 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ.

8 ಕಂಟೈನ್ಮೆಂಟ್ ವಲಯ ಘೋಷಣೆ: ಬಂಟ್ವಾಳದ ಮಂದಾರಬೆಟ್ಟುವಿನ ಮನೆಯೊಂದರಲ್ಲಿ 5 ಪಾಸಿಟಿವ್, ಕಪಿತಾನಿಯೋ ಪ್ರದೇಶದಲ್ಲಿ 28 ಪಾಸಿಟಿವ್, ಜಪ್ಪಿನಮೊಗರು ಪ್ರದೇಶದ ಮನೆಯೊಂದರಲ್ಲಿ 6 ಪಾಸಿಟಿವ್, ಮುಲ್ಕಿಯ ಅತಿಕಾರಿಬೆಟ್ಟುವಿನ ಮನೆಯೊಂದರಲ್ಲಿ 6 ಪಾಸಿಟಿವ್, ಮುಲ್ಕಿ ಲಿಂಗಪ್ಪಯ್ಯನ ಕಾಡುವಿನಲ್ಲಿ 6 ಪಾಸಿಟಿವ್, ಪಂಪ್‌ವೆಲ್‌ನ ಮನೆಯೊಂದರಲ್ಲಿ 5 ಪಾಸಿಟಿವ್, ಕುತ್ತಾರಿನ ಸಂತೋಷ್ ನಗರದ ಮನೆಯೊಂದರಲ್ಲಿ 5 ಪಾಸಿಟಿವ್, ಬಡಗ ಎಕ್ಕಾರಿನ ಮನೆಯೊಂದರಲ್ಲಿ 6 ಪಾಸಿಟಿವ್ ಬಂದಿದೆ. ಅದರಂತೆ ಬುಧವಾರ ಜಿಲ್ಲೆಯಲ್ಲಿ ಎಂಟು ಕಂಟೈನ್ಮೆಂಟ್ ವಲಯವನ್ನು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದ.ಕ.ಜಿಲ್ಲೆಯಲ್ಲಿ ಲಸಿಕೆ ಖಾಲಿ

ದ.ಕ.ಜಿಲ್ಲೆಗೆ ಮಂಗಳವಾರ ಬೆಂಗಳೂರಿನಿಂದ ತರಿಸಲಾಗಿದ್ದ 7 ಸಾವಿರ ಡೋಸ್ ಲಸಿಕೆಯ ಪೈಕಿ ಬುಧವಾರ 6,425 ಮಂದಿಗೆ ನೀಡಲಾಗಿದೆ. ಹಾಗಾಗಿ ಗುರುವಾರ ಯಾವುದೇ ಕೇಂದ್ರದಲ್ಲೂ ಕೋವಿಡ್ ನಿರೋಧಕ ಲಸಿಕೆ ಸಿಗುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸದ್ಯ ಜಿಲ್ಲೆಯಲ್ಲಿ ಕೇವಲ 575 ಡೋಸ್ ಲಸಿಕೆ ಮಾತ್ರ ಇದೆ. ಇದನ್ನು ಗುರುವಾರ ವೆನ್ಲಾಕ್‌ನ ಆಯುಷ್ ಆಸ್ಪತ್ರೆಯಲ್ಲಿ ಕೊಡಲಾಗುತ್ತದೆ. ಆ ಬಳಿಕ ಲಸಿಕೆ ಬರುವವರೆಗೆ ಕಾಯುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೋವ್ಯಾಕ್ಸಿನ್ ಲಸಿಕೆಯ ಕೊರತೆಯಿತ್ತು. ಈಗ ಕೋವಿಶೀಲ್ಡ್‌ನ ಕೊರತೆಯೂ ಇದೆ. ಬುಧವಾರ ಮಂಗಳೂರಿಗೆ 3,000 ಲಸಿಕೆ, ಬಂಟ್ವಾಳಕ್ಕೆ 1,500 ಲಸಿಕೆ, ಪುತ್ತೂರಿಗೆ 1,000 ಲಸಿಕೆ, ಸುಳ್ಯಕ್ಕೆ 500, ಬೆಳ್ತಂಗಡಿಗೆ 500 ಲಸಿಕೆ, ಅಲ್ಲದೆ ವೆನ್ಲಾಕ್ ಜಿಲ್ಲಾಸ್ಪತ್ರೆಗೆ 500 ಲಸಿಕೆಗಳು ಪೂರೈಕೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ವೆನ್ಲಾಕ್‌ನಲ್ಲಿ 200 ಡೋಸ್ ಲಸಿಕೆ ಮಾತ್ರ ಇದ್ದು, ಲಸಿಕೆ ಪೂರ್ಣಗೊಳ್ಳುವವರೆಗೆ ನೀಡಲಾಗುತ್ತದೆ. ಗುರುವಾರ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮವಿರುವ ಕಾರಣ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನ ನಡೆಯುವುದಿಲ್ಲ. ತಾಲೂಕು, ಸಮುದಾಯ ಆಸ್ಪತ್ರೆಗಳಲ್ಲಿ ಲಸಿಕೆ ಖಾಲಿಯಾದ ಕಾರಣ ಅಭಿಯಾನ ಇರುವುದಿಲ್ಲ. ಲಸಿಕೆ ಲಭ್ಯತೆ ಕಡಿಮೆ ಇದ್ದರೂ ಕೂಡ ತಕ್ಷಣಕ್ಕೆ ಬೆಂಗಳೂರಿನಿಂದ ಜಿಲ್ಲೆಗೆ ಲಸಿಕೆ ಬರುವುದು ಅನುಮಾನ ಎನ್ನಲಾಗುತ್ತಿದೆ.

ಈ ಬಗ್ಗೆ ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್ ಮಾತನಾಡಿ ಈಗಾಗಲೇ ಜಿಲ್ಲೆಗೆ ಬಂದ ಕೋವಿಶೀಲ್ಡ್ ಲಸಿಕೆ ಪೂರ್ಣವಾಗಿ ಖಾಲಿಯಾಗಿದೆ. ಉಳಿದ ಲಸಿಕೆಯನ್ನು ಗುರುವಾರ ವೆನ್ಲಾಕ್‌ನಲ್ಲಿ ನೀಡಲಾಗುತ್ತದೆ. ಉಳಿದಂತೆ ಬೆಂಗಳೂರಿನಿಂದ ಲಸಿಕೆ ಬಂದ ಬಳಿಕವಷ್ಟೇ ಜಿಲ್ಲೆಯಲ್ಲಿ ಲಸಿಕೆಯ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News