ಉಡುಪಿ ಜಿಲ್ಲೆ: 1656 ಮಂದಿಯಲ್ಲಿ ಕೋವಿಡ್ ಪಾಸಿಟಿವ್, ಸೋಂಕಿಗೆ ಮೂವರು ಬಲಿ

Update: 2021-05-05 16:06 GMT

ಉಡುಪಿ, ಮೇ 5: ಜಿಲ್ಲೆಯಲ್ಲಿ ಕೋವಿಡ್-19ರ ಎರಡನೇ ಅಲೆ ತನ್ನ ಉಗ್ರಸ್ವರೂಪವನ್ನು ತೋರಿಸಿದೆ. ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮೇಘ ಸ್ಫೋಟವಾಗಿದ್ದು ಒಟ್ಟು 1656 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಅಲ್ಲದೇ ಬುಧವಾರ ಜಿಲ್ಲೆಯಲ್ಲಿ ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 206ಕ್ಕೇರಿದೆ.

ದಿನದಲ್ಲಿ 433 ಮಂದಿ ಸೋಂಕಿನಿಂದ ಗುಣಮುಖರಾದರೆ, ಒಟ್ಟು 3925 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ. ಸಕ್ರಿಯರ ಸಂಖ್ಯೆಯೂ ಜಿಲ್ಲೆಯ ಮಟ್ಟಿಗೆ ಹೊಸ ದಾಖಲೆಯಾಗಿದೆ. ಈ ಮೊದಲು ಕಳೆದ ವರ್ಷದ ಆಗಸ್ಟ್ 13ರಂದು 2966 ಮಂದಿ ಸೋಂಕಿನ ಸಕ್ರಿಯರಿದ್ದುದೇ ಈವರೆಗಿನ ದಾಖಲೆಯಾಗಿತ್ತು.

ತೀವ್ರವಾದ ಜ್ವರ ಹಾಗೂ ಉಸಿರಾಟದ ತೊಂದರೆ ಮತ್ತು ಕೋವಿಡ್‌ನ ಗುಣಲಕ್ಷಣಗಳೊಂದಿಗೆ ಮಣಿಪಾಲ ಮತ್ತು ಉಡುಪಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ಉಡುಪಿ ಆಸುಪಾಸಿನ ಕುಂಜಿಬೆಟ್ಟಿನ 65 ವರ್ಷ, ಪರ್ಕಳದ 81 ವರ್ಷ ಹಾಗೂ ಬಡಗುಬೆಟ್ಟಿನ 53 ವರ್ಷ ಪ್ರಾಯದ ಪುರುಷರು ಕ್ರಮವಾಗಿ ಮೇ 3,4,5ರಂದು ಮೃತ ಪಟ್ಟಿದ್ದಾರೆ.

ಇಂದು ಪಾಸಿಟಿವ್ ಬಂದ 1656 ಮಂದಿಯಲ್ಲಿ 835 ಮಂದಿ ಪುರುಷ ರಾದರೆ, ಉಳಿದ 821 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 879 ಮಂದಿ, ಕುಂದಾಪುರ ತಾಲೂಕಿನ 399 ಹಾಗೂ ಕಾರ್ಕಳ ತಾಲೂಕಿನ 371 ಮಂದಿ ಇದ್ದು, ಉಳಿದ ಏಳು ಮಂದಿ ಹೊರಜಿಲ್ಲೆ-ದ.ಕ.2, ಉ.ಕ.2, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ತಲಾ 1- ಗಳಿಂದ ವಿವಿಧ ಕಾರಣ ಗಳ ಮೇಲೆ ಉಡುಪಿಗೆ ಆಗಮಿಸಿದವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಉಡುಪಿ ತಾಲೂಕಿನಲ್ಲಿ ಪಾಸಿಟಿವ್ ಬಂದವರಲ್ಲಿ 523 ಮಂದಿ ಪ್ರಾಥಮಿಕ ಸಂಪರ್ಕಿತರಾದರೆ, 346 ಮಂದಿ ಜ್ವರ ಹಾಗೂ ಉಸಿರಾಟ ತೊಂದರೆ ಯಿಂದ ಬಳಲುವವರು. ಕುಂದಾಪುರದಲ್ಲಿ 233 ಮತ್ತು 167 ಹಾಗೂ ಕಾರ್ಕಳದಲ್ಲಿ 202 ಮತ್ತು 105 ಮಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ ಐಎಲ್‌ಐನಿಂದ ನರಳುತಿದ್ದರು ಪಾಸಿಟಿವ್ ಬಂದಿದ್ದಾರೆ.

ಮಂಗಳವಾರ 433 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 31,235 ಕ್ಕೇರಿದೆ. ನಿನ್ನೆ ಜಿಲ್ಲೆಯ 2200 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 1656 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 35,366 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,17,395 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಗುರುವಾರ 500 ಮಂದಿಗೆ 2ನೇ ಡೋಸ್: ಗುರುವಾರ ಉಡುಪಿಯ ಸೈಂಟ್ ಸಿಸಿಲೀಸ್ ಲಸಿಕಾ ಕೇಂದ್ರ ಹಾಗೂ ನಗರ ಪ್ರಾಥಮಿಕ ಕೇಂದ್ರಗಳಲ್ಲಿ ಸುಮಾರು 500 ಮಂದಿಗೆ ಕೋವಿಶೀಲ್ಡ್ 2ನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಡಾ.ಸೂಡ ತಿಳಿಸಿದ್ದಾರೆ. ಅಲ್ಲದೇ ನಾಳೆ ಜಿಲ್ಲೆಗೆ ಕೋವಾಕ್ಸಿನ್ ಲಸಿಕೆಯೂ ಬರುವ ನಿರೀಕ್ಷೆ ಇದ್ದು ಅದನ್ನು ಶುಕ್ರವಾರ ಕೋವಾಕ್ಸಿನ್ ಎರಡನೇ ಡೋಸ್‌ನ ಅಗತ್ಯವುಳ್ಳವರಿಗೆ ನೀಡಲಾಗುತ್ತದೆ ಎಂದು ಡಿಎಚ್‌ಓ ಹೇಳಿದರು.

ಬುಧವಾರ  ಜಿಲ್ಲೆಯಲ್ಲಿ ಒಟ್ಟು 227 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇವರಲ್ಲಿ ಇವರಲ್ಲಿ 132 ಮಂದಿ ಮೊದಲ ಹಾಗೂ 95 ಮಂದಿ ಎರಡನೇ ಡೋಸ್ ಪಡೆದರು. ಇವರಲ್ಲಿ 45 ವರ್ಷ ಮೇಲಿನ 220 ಮಂದಿ ಇದ್ದರೆ ಉಳಿದವರು ಆರೋಗ್ಯ ಕಾರ್ಯಕರ್ತರು ಹಾಗೂ ಕೊರೋನ ಮುಂಚೂಣಿ ಯೋಧರು ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News