ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಸಂಸದರ ಮತೀಯ ಹೇಳಿಕೆ ಅಕ್ಷಮ್ಯ: ವೆಲ್ಫೇರ್ ಪಾರ್ಟಿ

Update: 2021-05-05 17:46 GMT

ಮಂಗಳೂರು, ಎ. 5: ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಬಿಜೆಪಿ  ಸಂಸದರ ಮತೀಯ ಹೇಳಿಕೆ ಅಕ್ಷಮ್ಯ ಎಂದು ವೆಲ್ಪೇರ್ ‌ಪಾರ್ಟಿ ದ.ಕ. ಜಿಲ್ಲಾ ಸಮಿತಿ  ಹೇಳಿಕೆ ನೀಡಿದ್ದು, ಘಟನೆಯನ್ನು ಖಂಡಿಸಿದೆ.

ಬಹು ನಿರೀಕ್ಷಿತವಾಗಿದ್ದ ಮತ್ತು ಆರೋಗ್ಯ ತಜ್ಞರಿಂದ ಮುನ್ನೆಚ್ಚರಿಕೆ ನೀಡಲ್ಪಟ್ಟಿದ್ದ, ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಇದರ ಆರಂಭಿಕ ಹಂತದಲ್ಲಿ ತಡೆಗಟ್ಟುವಿಕೆಯ ಬಗ್ಗೆ ಏನನ್ನೂ ಮಾಡದ ರಾಜ್ಯದ ಸಚಿವ, ಶಾಸಕ, ಸಂಸದರೆಲ್ಲರೂ ರಾಜ್ಯದ ಉಪಚುನಾವಣೆ ಹಾಗೂ ನೆರೆಯ ತಮಿಳುನಾಡು, ಕೇರಳ, ಪುದುಚೇರಿ ಮತ್ತು  ದೂರದ ಪಶ್ಚಿಮ ಬಂಗಾಳದಲ್ಲಿನ ಚುನಾವಣೆಗಳಲ್ಲಿ ಗೆಲ್ಲುವ ತಂತ್ರ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದರು. ಭಾಜಪ ಹೈಕಮಾನ್ಡ್  ಅವರೆಲ್ಲರನ್ನೂ ಅದಕ್ಕಾಗಿ ನಿಯೋಜಿಸಿತ್ತು  ಹೀಗೆ ತಮ್ಮ ಪಕ್ಷದ ಗೆಲುವಿಗಾಗಿ ಅವರನ್ನು ಸರಿಯಾಗಿ ಬಳಸಿಕೊಂಡ ಭಾಜಪ ಅಂದು ರಾಜ್ಯದ  ಜನತೆಯನ್ನು ತಿರುಗಿ ನೋಡಲು ಅವರಿಗೆ ಸಮಯ ನೀಡದೆ, ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟುವ ಯಾವ ಪೂರ್ವ ತಯಾರಿಯನ್ನು ಮಾಡದೆ  ಇದೀಗ ಕೊರೋನ ಪಿಡುಗು ರಾಜ್ಯಾದ್ಯಂತ ಅತ್ಯಂತ ಅಪಾಯ ಮಟ್ಟದಲ್ಲಿದ್ದು ಸರಕಾರದ ಪರವಾಗಿ ಯಾವುದೇ ಸವಲತ್ತು ಎಂದು ಮಾತ್ರವಲ್ಲ ಕನಿಷ್ಠ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನೂ ಒದಗಿಸಲಾಗದ ಸ್ಥಿತಿಯಲ್ಲಿದೆ.

ಚಾಮರಾಜ ನಗರದ 22 ಜನರ ಮಾರಣ ಹೋಮ ಮಧ್ಯರಾತ್ರಿಯಲ್ಲಿ ಕೇವಲ ಆಮ್ಲಜನಕ ಮುಗಿದ ಕಾರಣದಿಂದಾಗಿತ್ತು. ಹಾಗಿದ್ದರೂ, ರಾಜ್ಯದ ಹಲವಾರು ನಿಸ್ವಾರ್ಥ ಸಾಮಾಜಿಕ ಸಂಘಟನೆಗಳು ಸರಕಾರದ ನಿಷ್ಕ್ರಿಯತೆಯನ್ನು ನೋಡುತ್ತಾ ಕೈಕಟ್ಟಿ ಕುಳಿತಿರದೆ ತನ್ನ ಕೈಲಾದ ಎಲ್ಲಾ ರೀತಿಯಲ್ಲಿಯೂ ತೊಡಗಿಸಿಕೊಂಡಿದ್ದು ಇವೆಲ್ಲವನ್ನೂ ಗಮನಿಸುತ್ತಿರುವ ಸಾರ್ವಜನಿಕರು ಬಿಜೆಪಿ ಸರಕಾರ ಮತ್ತು ಅವರ ಸಂಘ ಪರಿವಾರದ ವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉಗಿಯುತ್ತಿರುವುದನ್ನು ಸಹಿಸಲಾಗದೆ ರಾಜ್ಯದ ಭಾಜಪದ ಸಂಸದರಾಗಿರುವ ತೇಜಸ್ವಿ ಸೂರ್ಯ  ಎಂಬವರನ್ನು ಅದಕ್ಕಾಗಿ ಚೂ ಬಿಟ್ಟಿದೆ ಆದ್ದರಿಂದಲೇ, ಸಮಾಜವು ಇಷ್ಟೊಂದು ಸಂಧಿಗ್ಧತೆಯ ಸಂಕಷ್ಟದಲ್ಲಿರುವ ಸಂಧರ್ಭವನ್ನೂ ಲೆಕ್ಕಿಸದೆ ಅವರು  ಎಂದಿನಂತೆ ತನ್ನ ಕೋಮುವಾದದ ಕೊನೆಯ ಅಸ್ತ್ರವನ್ನು, ಕೈಗೆತ್ತಿಕೊಂಡಿರುವುದು ಬಹಳ ನಾಚಿಕೆಗೆಟ್ಟ ವಿಚಾರ ಎಂಬುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ ಕ. ಜಿಲ್ಲಾ ಸಮಿತಿ ಪ್ರಕಟನೆ ತಿಳಿಸಿದೆ.

ಇನ್ನು ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಸಂಸದ ತೇಜಸ್ವಿ ಸೂರ್ಯ ಕೋಮು ದ್ವೇಷ ರಾಜಕೀಯವನ್ನು ಮಾಡುವ ಹುನ್ನಾರಕ್ಕಿಂತ ಮೊದಲು, ಇಂದು ಯಾವುದೇ ಸಮಸ್ಯೆಗಳನ್ನು ಮಟ್ಟಹಾಕಬೇಕಾದ ಕೇಂದ್ರದಲ್ಲಿನ ಸರ್ಕಾರ, ನಮ್ಮ ರಾಜ್ಯದಲ್ಲಿರುವ ಸರಕಾರ ಅಲ್ಲದೆ  ಬಿ.ಬಿ.ಎಂ.ಪಿ.ಯಲ್ಲಿನ ಆಡಳಿತ ಎಲ್ಲವೂ ಬಿಜೆಪಿಯ ಅಧಿಕಾರದಲ್ಲೇ ಇದ್ದು ಯಾವುದೇ ಲೋಪಗಳಿಗೆ ತಮ್ಮ ಪಕ್ಷವೇ ಹೊಣೆಯಾಗಿದೆಯೆಂಬ ಸಾಮಾನ್ಯ ಪ್ರಜ್ಞೆಯನ್ನಾದರೂ ಹೊಂದಿರಬೇಕಿತ್ತು. ಅದು ಬಿಟ್ಟು ಇಂದು ಸಮಾಜವು ಒಗ್ಗಟ್ಟಾಗಿ ಈ ಪಿಡುಗಿನ ವಿರುದ್ಧ ಹೋರಾಟದಲ್ಲಿ ಶ್ರಮಿಸುವ ಸಮಯದಲ್ಲಿ ಜನಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಮಾತನಾಡುವ ಅವರ ಜಾಯಮಾನವನ್ನು ಬಿಡದಿರುವ ಬೇಜವಾಬ್ದಾರಿ ಹೇಳಿಕೆಗಾಗಿ ಅವರು ರಾಜ್ಯದ ಜನತೆಯಲ್ಲಿ ಬೇಷರತ್ ಕ್ಷಮೆಯಾಚಿಸಬೇಕು. ಅಲ್ಲವಾದಲ್ಲಿ ತನ್ನ ಸಂಸತ್ ಸದಸ್ಯತನ  ತ್ಯಜಿಸಿ ಕೂಡಲೇ ಹೊರ ಬರಬೇಕು ಎಂಬುವುದಾಗಿ ಡಬ್ಲ್ಯು. ಪಿ.ಐ.ದ.ಕ. ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

ಮಾತ್ರವಲ್ಲ ಈಗಾಗಲೇ ಅವರು ಬಿಚ್ಚಿಟ್ಟ ಕೋವಿಡ್ ವಾರ್ ರೂಮಿನ ಹಗರಣದ ಸರಿಯಾದ ತನಿಖೆ ನಡೆಸಿ ಅಲ್ಲಿನ ನೇಮಕಾತಿ ಮತ್ತು ಇತರ ಯಾವುದೇ ಮೋಸಗಾರಿಕೆ ಆಗಿದ್ದಲ್ಲಿ ಇದರ ಉಸ್ತುವಾರಿ ವಹಿಸಿದ್ದ ಉಪ ಮುಖ್ಯಮಂತ್ರಿ ಅಶ್ವಥ್ ‌ನಾರಾಯಣ,  ಆರೋಗ್ಯ ‌ಸಚಿವ ಡಾ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್ ಮತ್ತು ಇಷ್ಟೊಂದು ರೀತಿಯ ಬೆಡ್  ದಂಧೆಗೆ ನೇರ ಹೊಣೆಯಾಗಿರುವ ಎಲ್ಲಾ ಸಚಿವರು ನೈತಿಕ ‌ಹೊಣೆ ಹೊತ್ತು ಕೂಡಲೇ ರಾಜೀನಾಮೆ ‌ನೀಡಬೇಕೆಂದು‌ ಒಟ್ಟು ಸಮಾಜದ ಧ್ವನಿಯಾಗಿ ನಮ್ಮ ವೆಲ್ಫೇರ್ ಪಕ್ಷವು‌ ಆಗ್ರಹಿಸುತ್ತದೆಯೆಂಬುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News