ಆಮ್ಲಜನಕದ ಸಮಸ್ಯೆ: ಕೇಂದ್ರಕ್ಕೆ ಹೈಕೋರ್ಟ್ ನೀಡಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸುಪ್ರೀಂ ತಡೆ

Update: 2021-05-05 18:36 GMT

ಹೊಸದಿಲ್ಲಿ, ಮೇ 5: ಕೊರೋನ ಸೋಂಕಿನ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರೀಯ ರಾಜಧಾನಿ ದಿಲ್ಲಿಗೆ ನಿಗದಿಯಾಗಿರುವಂತೆ ಪೂರ್ಣಪ್ರಮಾಣದ ಆಮ್ಲಜನಕ ತಕ್ಷಣ ಪೂರೈಸುವಂತೆ ಸೂಚಿಸಿದ ತನ್ನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಜಾರಿಗೊಳಿಸಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ.

ಆಮ್ಲಜನಕ ಕೊರತೆ ಸಮಸ್ಯೆ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಯಾಕೆ ಜರಗಿಸಬಾರದು ಎಂದು ಕಾರಣ ಕೇಳಿ ಮಂಗಳವಾರ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ತಡೆಯಾಜ್ಞೆ ನೀಡಿರುವುದನ್ನು ‘ದಿಲ್ಲಿಗೆ ಆಮ್ಲಜನಕ ಪೂರೈಕೆ ಪ್ರಕ್ರಿಯೆಯ ಮೇಲೆ ಹೈಕೋರ್ಟ್ ನಿಗಾ ವಹಿಸದಂತೆ ತಡೆದಿರುವುದು ’ ಎಂದು ಅರ್ಥೈಸಬಾರದು. ದಿಲ್ಲಿಗೆ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುವ ಸಮಗ್ರ ವಿವರವನ್ನು ಗುರುವಾರ ಬೆಳಗ್ಗೆ 10:30ರ ಒಳಗೆ ಕೇಂದ್ರ ಸರಕಾರ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಜನರ ಜೀವಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭ ಪರಸ್ಪರ ಸಹಕಾರ ಅಗತ್ಯವಾಗಿದೆ. ಅಂತಿಮವಾಗಿ ಅಧಿಕಾರಿಗಳನ್ನು ಜೈಲಿನಲ್ಲಿರಿಸಿ ನ್ಯಾಯಾಂಗ ನಿಂದನೆ ಪ್ರಕರಣ ಜರಗಿಸುವುದರಿಂದ ಪ್ರಯೋಜನವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರ ಆರೋಗ್ಯಕ್ಷೇತ್ರದ ಸಮಸ್ಯೆಗೆ ಪರಿಹಾರ ರೂಪಿಸಲು ಗರಿಷ್ಟ ಪ್ರಯತ್ನ ನಡೆಸುತ್ತಿವೆ. ಮೇ 4ರಂದು 585 ಟನ್ ಆಮ್ಲಜನಕ ಪೂರೈಸಲಾಗಿದೆ ಎಂದು ಕೇಂದ್ರ ಸರಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಮಾಹಿತಿ ನೀಡಿದರು. ಇದೊಂದು ರಾಷ್ಟ್ರೀಯ ಸಮಸ್ಯೆಯಲ್ಲ, ಜನತೆ ಸಾಯುತ್ತಿಲ್ಲ ಅಥವಾ ಕೇಂದ್ರ ಸರಕಾರ ಏನನ್ನೂ ಮಾಡುತ್ತಿಲ್ಲ ಎಂದು ಯಾರೂ ಹೇಳುವುದಿಲ್ಲ. ಆದರೆ ಇತರ ರಾಜ್ಯಗಳಿಂದ ಆಮ್ಲಜನಕ ಪಡೆಯುವುದು ನಿಮ್ಮ ಯೋಜನೆಯಾಗಿದ್ದರೆ ಆ ರಾಜ್ಯಕ್ಕೆ ಕೊರತೆಯಾಗಬಾರದು. ಆದ್ದರಿಂದ ಆಮ್ಲಜನಕ ಲಭ್ಯತೆ ಮತ್ತು ಹಂಚಿಕೆಯ ಬಗ್ಗೆ ಸಮಗ್ರ ವಿವರವನ್ನು ಗುರುವಾರ ಬೆಳಗ್ಗೆ 10:30ರೊಳಗೆ ಒದಗಿಸಬೇಕು ಎಂದು ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News