ಮಂಗಳೂರು : ಲಸಿಕೆಗಾಗಿ ಆನ್‌ಲೈನ್ ಬುಕ್ ಮಾಡಲು ಗೊತ್ತಿಲ್ಲದವರು ಸಾಯಬೇಕೇ ಎಂದು ಪ್ರಶ್ನಿಸಿದ ಹಿರಿಯ ನಾಗರಿಕರು

Update: 2021-05-06 07:33 GMT

ಮಂಗಳೂರು, ಮೇ 6: ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ಬರುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗಿಲ್ಲ. ಇದರ ನಡುವೆ ಕೋವಿಶೀಲ್ಡ್ ಲಸಿಕೆಯ ಕೊರತೆಯೂ ದ.ಕ. ಜಿಲ್ಲೆಯ ಜನರನ್ನು ಕಂಗೆಡಿಸಿದೆ.

‘‘ನನಗೆ ಲಸಿಕೆ ಹಾಕಿಸಬೇಕು. ಕೇಳಿದರೆ ಆನ್‌ಲೈನ್ ಬುಕ್ ಮಾಡಿ ಬನ್ನಿ ಎನ್ನುತ್ತಾರೆ. ಅದರ ಜತೆಯಲ್ಲೇ ಇಲ್ಲಿ ಪ್ರಥಮ ಡೋಸ್ ಸದ್ಯ ಇಲ್ಲ ಎನ್ನುತ್ತಾರೆ. ನನಗೆ ಆನ್‌ಲೈನ್ ಬುಕ್ ಮಾಡಲು ಬರುವುದಿಲ್ಲ. ಹಾಗಿದ್ದರೆ ನನಗೆ ಲಸಿಕೆ ಇಲ್ಲವೇ ? ಆನ್‌ಲೈನ್ ಬುಕ್ ಮಾಡಲು ಗೊತ್ತಿಲ್ಲದವರು ಸಾಯಬೇಕೇ ?’’ ಎಂದು ಹಿರಿಯ ನಾಗರಿಕರೊಬ್ಬರು ವೆನ್‌ಲಾಕ್ ಆಯುಷ್ ವಿಭಾಗದ ಕೋವಿಡ್ ಲಸಿಕಾ ಕೇಂದ್ರದ ಹೊರಗಡೆ ಲಸಿಕೆಗಾಗಿ ಟೋಕನ್ ನೀಡುವ ಸಿಬ್ಬಂದಿ ಜತೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂತು.

ಸಿಬ್ಬಂದಿ ಅತ್ಯಂತ ವಿನಯದಿಂದಲೇ ‘‘ಇಂದು ಕೋವಿಶೀಲ್ಡ್‌ನ ಎರಡನೆ ಡೋಸ್‌ನವರಿಗೆ 200 ಮಂದಿಗೆ ಟೋಕನ್ ನೀಡಲಾಗುತ್ತಿದೆ. ಪ್ರಥಮ ಡೋಸ್‌ಗೆ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ. ನಿಮಗೆ ಆನ್‌ಲೈನ್ ಬುಕ್ ಮಾಡಲು ಗೊತ್ತಿಲ್ಲವಾದಲ್ಲಿ ಗೊತ್ತಿರುವವರಲ್ಲಿ ಮಾಡಿಸಿಕೊಳ್ಳಿ’’ ಎಂದು ಸಲಹೆಯನ್ನು ನೀಡುತ್ತಿದ್ದರು.

ಇಂದು ಕೂಡಾ ಕೊರೋನ ಫ್ರಂಟ್ ಲೈನ್ ವಾರಿಯರ್ಸ್‌ಗಳಾಗಿರುವ ಆದ್ಯತೆಯ ನೆಲೆಯಲ್ಲಿ ಪ್ರಥಮ ಹಂತದಲ್ಲಿ ಲಸಿಕೆ ಪಡೆಯಬೇಕಾಗಿರುವ ಕೆಲ ಯುವ ಪೊಲೀಸ್ ಸಿಬ್ಬಂದಿ ಕೂಡಾ ಪ್ರಥಮ ಡೋಸ್‌ಗಾಗಿ ಆಗಮಿಸಿ ಹಿಂತಿರುಗಿದರು.

ಕೋವ್ಯಾಕ್ಸಿನ್ ಯಾವಾಗ ಬರುತ್ತೆ ?

ಪ್ರಥಮ ಡೋಸ್ ಕೋವ್ಯಾಕ್ಸಿನ್ ಪಡೆದವರು ದ್ವಿತೀಯ ಡೋಸ್ ಕೂಡಾ ಅದೇ ಲಸಿಕೆಯನ್ನು ಪಡೆಯಬೇಕಾಗುತ್ತದೆ. ಈಗಾಗಲೇ ಪ್ರಥಮ ಡೋಸ್ ಪಡೆದಿದ್ದ ಹಲವು ಹಿರಿಯ ನಾಗರಿಕರು ವೆನ್‌ಲಾಕ್‌ನ ಲಸಿಕಾ ಕೇಂದ್ರದಲ್ಲಿ ಆಗಮಿಸಿ ಹಿಂತಿರುಗಿದರು.

ಕೋವಿಶೀಲ್ಡ್ ದ್ವಿತೀಯ ಡೋಸ್ ಕೂಡಾ 200 ಮಂದಿಗೆ ಮಾತ್ರ

ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಇಂದು ಕೋವಿಶೀಲ್ಡ್ ದ್ವಿತೀಯ ಡೋಸ್ 200 ಮಂದಿಗೆ ಮಾತ್ರ ಟೋಕನ್ ನೀಡಿ ನೀಡಲಾಯಿತು. ಬಹಳಷ್ಟು ಮಂದಿ ಹಿರಿಯ ನಾಗರಿಕರು ತಮ್ಮ ಮನೆಯವರ ಜತೆ ಆಗಮಿಸಿ ಹಿಂತಿರುಗಬೇಕಾಯಿತು. ಲಸಿಕೆಗಾಗಿ ಬರುವವರನ್ನು ಸಮಾಧಾನ ಪಡಿಸಿ ಕಳುಹಿಸುವುದು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಅವರ ಅಸಮಾಧಾನ ಮಾತುಗಳನ್ನು ಕೇಳಿಸಿಕೊಳ್ಳುವುದು ಕೂಡಾ ಸಿಬ್ಬಂದಿ ಪಾಲಾಗಿದೆ.

ಶಿಸ್ತಿಗೆ ಒತ್ತು

ವಿಶೇಷವೆಂದರೆ ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಬರುವವರಿಗೆ ಕೇಂದ್ರದ ಒಳ ಹಾಗೂ ಹೊರ ಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಏಕಕಾಲದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಕುಳಿತು ಟೋಕನ್ ಸಂಖ್ಯೆ ಕರೆಯುವವರೆಗೆ ಕಾಯಬಹುದಾಗಿದೆ. ಆಸನದ ವ್ಯವಸ್ಥೆ ಇಲ್ಲದಾಗ ಕೆಲವರು ಹೊರಗಡೆ ಸುರಕ್ಷಿತ ಅಂತರ ಕಾಯ್ದುಕೊಂಡು ನಿಲ್ಲುವ ವ್ಯವಸ್ಥೆಯನ್ನೂ ಇಲ್ಲಿನ ಸಿಬ್ಬಂದಿ ಮಾಡುತ್ತಾರೆ. ಒಳಗಡೆಯೂ ಲಸಿಕೆ ನೀಡುವ ದಾದಿಯರು ಮಾತ್ರವಲ್ಲದೆ, ಲಸಿಕಾ ಕೊಠಡಿಯೊಳಗೆ ಹಿರಿಯ ನಾಗರಿಕರನ್ನು ಅತ್ಯಂತ ಜತನದಿಂದ ಕರೆದೊಯ್ದು ಲಸಿಕೆ ಹಾಕಿಸುವಂತಹ ಸಿಬ್ಬಂದಿ ವರ್ಗವೂ ಇಲ್ಲಿದೆ. ನೂರಾರು ಜನರು ಬಂದಾಗಲು ಅತ್ಯಂತ ಶಿಸ್ತಿನಿಂದ ಲಸಿಕೆ ಹಾಕಿಸಿಕೊಳ್ಳಲು ಅವಕಾಶವನ್ನು ಇಲ್ಲಿ ನೀಡಲಾಗುತ್ತದೆ.

ಲಸಿಕಾ ಕೇಂದ್ರದ ಹೊರಗಡೆ ಬಾಗಿಲ ಬಳಿಯ ಗಾಜಿನ ಗೋಡೆಯ ಮೇಲೆ ಮೇ 6ರಂದು 2ನೆ ಡೋಸ್ ಕೋವಿಶೀಲ್ಡ್ ಮಾತ್ರ ಲಭ್ಯ ಎಂದು ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ ಪೋಸ್ಟರ್ ಹಾಕಲಾಗಿದೆ. ಜತೆಗೆ 45 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಇಲ್ಲ ಎಂಬ ಪೋಸ್ಟರ್ ಕೂಡಾ ಇದೆ. ಇಂದು ಕೇವಲ 200 ಮಂದಿಗೆ ವೆನ್‌ಲಾಕ್‌ನಲ್ಲಿ ಮಾತ್ರವೇ ಕೋವಿಶೀಲ್ಡ್ ದ್ವಿತೀಯ ಡೋಸ್‌ನವರಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ನಿನ್ನೆಯೇ ಪತ್ರಿಕಾ ಪ್ರಕಟನೆಯನ್ನೂ ನೀಡಿತ್ತು. ಹಾಗಿದ್ದರೂ ಲಸಿಕಾ ಕೇಂದ್ರಕ್ಕೆ ಬರುವವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News