ಆಮ್ಲಜನಕ ಕೊರತೆ ಇದೆ ಎಂದು ನೋಟಿಸ್ ಹಾಕಿದ್ದಕ್ಕೆ ಆಸ್ಪತ್ರೆ ವಿರುದ್ಧ ಕೇಸು ದಾಖಲಿಸಿದ ಉತ್ತರಪ್ರದೇಶ ಪೊಲೀಸ್

Update: 2021-05-06 17:30 GMT

ಹೊಸದಿಲ್ಲಿ, ಮೇ 6: ಆಮ್ಲಜನಕದ ಕೊರತೆ ಇದೆ ಎಂದು ನೋಟಿಸು ಬಿಡುಗಡೆ ಮಾಡಿದ ಲಕ್ನೋ ಆಸ್ಪತ್ರೆಯ ನಿರ್ದೇಶಕರು ಹಾಗೂ ಇತರರ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಳ ದಂಧೆ ಹಾಗೂ ವದಂತಿ ಹರಡುವ ಉದ್ದೇಶದಿಂದ ಸನ್ ಆಸ್ಪತ್ರೆಯ ನಿರ್ದೇಶಕ ಅಖಿಲೇಶ್ ಪಾಂಡೆ ಅವರು ಮೇ 5ರಂದು ಈ ನೋಟಿಸ್ ಬಿಡುಗಡೆ ಮಾಡಿದ್ದರು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. 

ವಿಭುಕ್ತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ‘‘ಯುಪಿಸಿಎಂ/ಕೇಂದ್ರ ಸರಕಾರಕ್ಕೆ ಮರು ಮನವಿ ಸಲ್ಲಿಸಿದ ಬಳಿಕವೂ ನಮಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗಿಲ್ಲ. ಆದುದರಿಂದ ಆಮ್ಲಜನಕದ ವ್ಯವಸ್ಥೆಯಲ್ಲಿ ಇರುವ ರೋಗಿಗಳ ಸಂಬಂಧಿಕರು ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ನಾವು ಮನವಿ ಮಾಡುತ್ತೇವೆ. ಅನಾನುಕೂಲತೆಗೆ ಕ್ಷಮೆ ಕೋರುತ್ತೇವೆ’’ ಎಂದು ನೋಟಿಸ್ ಹೇಳಿತ್ತು. 

ಆಮ್ಲಜನಕದ ಕೊರತೆ ಇದೆ ಎಂದು ವದಂತಿ ಹಬ್ಬಿಸಲು ಈ ನೋಟಿಸು ಬಿಡುಗಡೆ ಮಾಡಲಾಗಿತ್ತು. ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕದ ಕಾಳದಂಧೆ ನಡೆಸುವ ಉದ್ದೇಶವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ‘‘ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸುವಂತೆ ಹಾಗೂ ಜನರ ನಡುವೆ ಆಂತಕ ಸೃಷ್ಟಿಸಲು ವದಂತಿ ಹಬ್ಬಿಸದಂತೆ ನಿರ್ದೇಶಿಸಲಾಗಿದೆ. 

ಆಮ್ಲಜನಕದ ಸೌಲಭ್ಯ ಇರುವ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುವಂತೆ ಆಮ್ಲಜನಕದ ವ್ಯವಸ್ಥೆಯಲ್ಲಿ ಇರುವ ರೋಗಿಗಳ ಸಂಬಂಧಿಕರಲ್ಲಿ ವಿನಂತಿಸಿ ಆಸ್ಪತ್ರೆ ಸಾಮಾಜಿಕ ಜಾಲ ತಾಣದಲ್ಲಿ ಮೇ 3ರಂದು ನೋಟಿಸು ಬಿಡುಗಡೆ ಮಾಡಿದೆ’’ ಎಂದು ನೋಟಿಸು ಹೇಳಿದೆ. ‘‘ಇದರಿಂದಾಗಿ ಜನರಲ್ಲ ಆಂತಕ ಸೃಷ್ಟಿಯಾಗಿದೆ. ತನಿಖೆಯ ಬಳಿಕ ನೋಟಿಸು ನೀಡುವ ಸಂದರ್ಭ ಆಸ್ಪತ್ರೆಯಲ್ಲಿ 8 ಜಂಬೋ ಸಿಲಿಂಡರ್ ಇತ್ತು. ಅಲ್ಲದೆ, 2 ಬಿ ಮಾದರಿಯ ಆಮ್ಲಜನಕದ ಸಿಲಿಂಡರ್ಗಳು ಹಾಗೂ ಸಾಂದ್ರಕಗಳು ಇದ್ದುವು ಎಂಬುದು ಬೆಳಕಿಗೆ ಬಂತು’’ ಎಂದು ನೋಟಿಸು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News