ಆಮ್ಲಜನಕ ಹಂಚಿಕೆ ಪ್ರಕ್ರಿಯೆಯ ಪರಿಷ್ಕರಣೆ ಅಗತ್ಯ: ಕೇಂದ್ರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ. ಮೇ 6: ದೇಶದಲ್ಲಿ ಇದುವರೆಗೆ ಆಸ್ಪತ್ರೆಗಳ ಹಾಸಿಗೆ ಮತ್ತು ಐಸಿಯು ಬಳಕೆಯ ಆಧಾರದಲ್ಲಿ ಹಂಚಿಕೆಯಾಗುತ್ತಿದ್ದ ಆಮ್ಲಜನಕದ ಪೂರೈಕೆ ಪ್ರಕ್ರಿಯೆಯ ಸಂಪೂರ್ಣ ಪರಿಷ್ಕರಣೆಯ ಅಗತ್ಯವಿದೆ. ಮನೆಯಲ್ಲಿ ಕ್ವಾರಂಟೈನ್ ಆದವರು, ಆ್ಯಂಬುಲೆನ್ಸ್ ಬಳಕೆಯನ್ನು ಲೆಕ್ಕಚಾರ ಹಾಕಬೇಕು ಮತ್ತು ಆಮ್ಲಜನಕ ಹಂಚಿಕೆಯ ಲೆಕ್ಕಪರಿಶೋಧನೆ ನಡೆಸುವ ವ್ಯವಸ್ಥೆ ಅನುಸರಿಸಿದರೆ ಕರ್ತವ್ಯಲೋಪ ನಡೆಸಿದವರನ್ನು ಪತ್ತೆಹಚ್ಚಿ ಹೊಣೆಗಾರರನ್ನಾಗಿಸಲು ಸಾಧ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಆಧಾರದಲ್ಲಿ ಆಮ್ಲಜನಕ ಹಂಚಿಕೆ ಸರಿಯಲ್ಲ. ಎಲ್ಲರೂ ಆಸ್ಪತ್ರೆಗೆ ಹೋಗಬೇಕು, ಐಸಿಯು(ತೀವ್ರ ನಿಗಾ ಘಟಕ)ಗೆ ದಾಖಲಾಗಬೇಕು ಎಂದಿಲ್ಲ. ಮನೆಯಲ್ಲೇ ಕ್ವಾರಂಟೈನ್ ಆದವರಿಗೂ ಆಮ್ಲಜನಕದ ಅಗತ್ಯ ಬೀಳಬಹುದು. ಸರಕಾರ ರೂಪಿಸಿರುವ ಸೂತ್ರದಲ್ಲಿ ಸಾಗಣೆ, ಆ್ಯಂಬುಲೆನ್ಸ್ , ಕೋವಿಡ್ ಸುರಕ್ಷೆಯ ವ್ಯವಸ್ಥೆಯನ್ನು ಪರಿಗಣಿಸಿಲ್ಲ. ಈ ವಿಷಯವನ್ನು ದೇಶವ್ಯಾಪಿಯಾಗಿ ಗಮನಿಸಬೇಕಿದೆ. ಆದ್ದರಿಂದ ಹಂಚಿಕೆಯಾದ ಬಳಿಕ ಸಾಗಣೆ ವ್ಯವಸ್ಥೆ, ಆಸ್ಪತ್ರೆಗಳಿಗೆ ಪೂರೈಸುವ ಪ್ರಕ್ರಿಯೆಯನ್ನೂ ಪರಿಗಣಿಸಿ ಹೊಸ ಸೂತ್ರ ರೂಪಿಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ಹೇಳಿದೆ.
ಹಲವು ರಾಜ್ಯಗಳು, ವಿಶೇಷವಾಗಿ ದಿಲ್ಲಿಯಲ್ಲಿ ಆಮ್ಲಜನಕದ ತೀವ್ರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಹಂಚಿಕೆಯ ಕುರಿತ ಸರಕಾರದ ಯೋಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೋಂಕಿನ 3ನೇ ಅಲೆಯ ಸಾಧ್ಯತೆಯಿದೆ. ಒಂದು ವೇಳೆ 3ನೇ ಅಲೆಯೂ ಬಂದರೆ ಸಮಸ್ಯೆಯ ನಿರ್ವಹಣೆಗೆ ನಿಮ್ಮ ಯೋಜನೆಯೇನು? ಕಂಟೈನರ್ಗಳು ಲಭ್ಯವಾಗದು ಎಂದಾದರೆ ಏನು ಮಾಡುತ್ತೀರಿ ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, ಸುಪ್ರೀಂಕೋರ್ಟ್ ನಮಗೆ ಮಾರ್ಗದರ್ಶನ ನೀಡಬಹುದು ಎಂದು ಕೇಂದ್ರ ಸರಕಾರ ಉತ್ತರಿಸಿತು.
ರಾಜ್ಯಗಳಿಗೆ ಹಂಚಿಕೆಯಾದ ಆಮ್ಲಜನಕ ಕಾಳಸಂತೆಕೋರರ ಕೈಗೆ ಸಿಗುವುದಿಲ್ಲ ಎಂಬ ಖಾತರಿಯಿದೆಯೇ? ಹಂಚಿಕೆಯಾದ ಆಮ್ಲಜನಕ ಉದ್ದೇಶಿತ ಗುರಿ ತಲುಪಿದೆಯೇ ಎಂಬುದರ ಮೇಲೆ ನಿಗಾ ಇರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರಕಾರ , ಆಮ್ಲಜನಕದ ಬಳಕೆಯ ಮೇಲೆ ರಾಜ್ಯ ಸರಕಾರ ನಿಗಾ ವಹಿಸಿದೆ. ಉತ್ತರಪ್ರದೇಶ ಸರಕಾರ ಆಮ್ಲಜನಕ ಪೂರೈಕೆಯ ಟ್ಯಾಂಕರ್ ಮೇಲೆ ಜಿಪಿಎಸ್ ಅಳವಡಿಸಿದೆ ಎಂದು ಹೇಳಿತು.