ಮಂಗಳೂರಿನ ಶವಾಗಾರದಲ್ಲೂ ಕ್ಯೂ!

Update: 2021-05-07 07:13 GMT

ಮಂಗಳೂರು, ಮೇ 7: ನಗರದ ರುದ್ರಭೂಮಿಗಳಲ್ಲೂ ಕ್ಯೂ ಕಂಡುಬರುತ್ತಿದ್ದು, ನಂದಿಗುಡ್ಡೆ ರುದ್ರಭೂಮಿಯ ಏಳು ಚಿತಾಗಾರಗಳು ನಿನ್ನೆ ಏಕಕಾಲಕ್ಕೆ ಭರ್ತಿಯಾಗಿದ್ದುದು ವರದಿಯಾಗಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ಕೆ.ಆರ್‌.ಪುರಂನ ಅಯ್ಯಪ್ಪ ನಗರದ ನಿವಾಸಿ ಕವಿತಾ ಎಂಬವರ ಪತಿ ರವಿಶಂಕರ್ ರನ್ನು ಅಲ್ಲಿನ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಮಂಗಳೂರಿಗೆ ಕರೆತರಲಾಗಿತ್ತು. ಗುರುವಾರ ಬೆಳಗ್ಗೆ ಅವರು ಮಂಗಳೂರು ತಲುಪಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಆದರೆ ಅವರ ಕೋವಿಡ್ ವರದಿ ನೆಗೆಟಿವ್ ಆಗಿತ್ತು.

ರವಿಶಂಕರ್ ರಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೆ ಅಲೆದಾಡಿ ಆ್ಯಂಬುಲೆನ್ಸ್ ಕೂಡಾ ಸಿಗದೆ ಕೊನೆಗೆ ಸುಮಾರು 30,000 ರೂ. ಖರ್ಚು ಮಾಡಿಕೊಂಡು ಆ್ಯಂಬುಲೆನ್ಸ್ ಮೂಲಕ ರವಿಶಂಕರ್ ಅವರನ್ನು ಕವಿತಾ ಮಂಗಳೂರಿಗೆ ಕರೆತಂದಿದ್ದರು. ಇಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸಿದೆ  ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರಕ್ಕೆ ಸಹಕರಿಸಿದ ಯೂತ್ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ ಲುಕ್ಮಾನ್ ಬಂಟ್ವಾಳ ಹಾಗೂ ಸುಹೈಲ್ ಕಂದಕ್ ನೇತೃತ್ವದ ತಂಡ ಮೃತದೇಹವನ್ನು ನಂದಿಗುಡ್ಡೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿತ್ತು. ಅಲ್ಲಿನ ಏಳು ಚಿತಾಗಾರಗಳೂ ಭರ್ತಿಯಾಗಿದ್ದು, ಮತ್ತೆ ನಾಲ್ಕು ಮೃತದೇಹಗಳು ಅಂತ್ಯಸಂಸ್ಕಾರಕ್ಕಾಗಿ ಕಾಯುತ್ತಿದ್ದವು. ಬಳಿಕ ರವಿಶಂಕರ್ ಅವರ ಮೃತದೇಹವನ್ನು ಕದ್ರಿಯ ರುದ್ರಭೂಮಿಗೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News