ದ.ಕ. ಜಿಲ್ಲೆಯಲ್ಲಿ ಬಿಗಿಗೊಂಡ ಕೋವಿಡ್ ಕರ್ಫ್ಯೂ

Update: 2021-05-07 07:44 GMT

ಮಂಗಳೂರು, ಮೇ 7: ದ.ಕ. ಜಿಲ್ಲೆಯಲ್ಲಿ ಕೋವಿಂಡ್ ನಿಯಂತ್ರಣಕ್ಕಾಗಿ ಬೆಳಗ್ಗೆ 9 ಗಂಟೆಯ ಬಳಿಕ ಸಾರ್ವಜನಿಕರ ಅನಗತ್ಯ ಸಂಚಾರವನ್ನು ನಿರ್ಬಂಧಿಸಿ ಇಂದಿನಿಂದ ಕರ್ಫ್ಯೂ ಬಿಗಿಗೊಳಿಸಲಾಗಿದ್ದು, 10 ಗಂಟೆಯ ಬಳಿಕ ಅನಗತ್ಯ ಸಂಚಾರದ ವಾಹನಗಳನ್ನು ತಡೆದು ದಂಡ ವಿಧಿಸುವ ಕಾರ್ಯ ಪೊಲೀಸರಿಂದ ನಡೆಯಿತು.

ಬೆಳಗ್ಗೆ 6ರಿಂದ 9 ಗಂಟೆಯವರೆಗೆ ತರಕಾರಿ, ಹಣ್ಣು ಹಂಪಲು, ಮೀನು-ಮಾಂಸ, ಹಾಲು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಮಾರುಕಟ್ಟೆ, ಸೂಪರ್ ಮಾರುಕಟ್ಟೆ ಸೇರಿದಂತೆ ಒಳ ರಸ್ತೆಗಳ ಅಂಗಡಿ ಮುಂಗಟ್ಟುಗಳಲ್ಲಿಯೂ ಖರೀದಿಗೆ ಜನಸಂದಣಿ ಹೆಚ್ಚಾಗಿತ್ತು. ಶನಿವಾರ ಹಾಗೂ ರವಿವಾರ ಕೂಡಾ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿರುವ ಕಾರಣ ಖರೀದಿಗಾಗಿ ಜನರು ತಡಕಾಡಿದರು. ದಿನಸಿ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಖರೀದಿ ನಡೆಸಿದರೆ, ಮೆಡಿಕಲ್‌ಗಳಲ್ಲೂ ಜನಸಂದಣಿ ಕಂಡುಬಂತು.

ವೈನ್ ಶಾಪ್‌ಗಳೆದರೂ ಕ್ಯೂ!

ಬೆಳಗ್ಗೆ ಆರು ಗಂಟೆಯ ಹೊತ್ತಿಗಾಗಲೇ ವೈನ್ ಶಾಪ್‌ಗಳೆದರೂ ಗ್ರಾಹಕರು ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ನಗರದ ಎಲ್ಲೆಡೆ ಅಂಗಡಿಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. 10 ಗಂಟೆಯವರೆಗೆ ನಗರದ ರಸ್ತೆಗಳಲ್ಲಿ ಭಾರೀ ವಾಹನ ದಟ್ಟಣೆ ಕಂಡು ಬಂತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗೆ ತೆರಳುವ ಗಡಿಬಿಡಿ ಜನರದ್ದಾಗಿತ್ತು. ಸೆಂಟ್ರಲ್ ಮಾರುಕಟ್ಟೆ ಸುತ್ತಮುತ್ತ ಸೇರಿದಂತೆ ನಗರದ ಕಂಕನಾಡಿ, ಜಪ್ಪು, ತೊಕ್ಕೊಟ್ಟು, ಉಳ್ಳಾಲ ಮೊದಲಾದ ಕಡೆ ಮಾರುಕಟ್ಟೆಗಳಲ್ಲಿ ಕರ್ಫ್ಯೂ ವಿನಾಯಿತಿ ಅವಧಿಯಲ್ಲಿ ಜನಸಂದಣಿ ಕಂಡು ಬಂತು.

10 ಗಂಟೆಯ ಬಳಿಕವೂ ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ನಡೆಸಿ ಕಳುಹಿಸಿದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನದಾರರನ್ನು ಎಚ್ಚರಿಕೆ ನೀಡಿ, ದಂಡ ಹಾಕಿ ಕಳುಹಿಸಿದರೆ, ವಾಹನ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನಗರದ ಪಂಪ್‌ವೆಲ್, ವೆಲೆನ್ಶಿಯಾ, ಕ್ಲಾಕ್‌ಟವರ್ ಬಳಿ ಪೊಲೀಸರು ನೀಡಿದರು.

ಬೆಳಗ್ಗೆ 10.30ರ ವೇಳೆಗೆ ನಗರದ ಕ್ಲಾಕ್ ಟವರ್ ಬಳಿಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಲ್ಲಿದ್ದ ಪೊಲೀಸ್ ಸಿಬ್ಬಂದಿಯ ತಪಾಸಣಾ ಕಾರ್ಯವನ್ನು ಪರಿಶೀಲಿಸುವ ಜತೆಗೆ ತಾವೂ ಖುದ್ದು ಪರಿಶೀಲಿಸಿದರು. ಬಳಿಕ ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ವಿನಯ್ ಗಾಂವ್ಕರ್ ಕೂಡಾ ಆಗಮಿಸಿ ಅನಗತ್ಯ ವಾಹನ ಚಾಲಕರನ್ನು ತಪಾಸಣೆ ನಡೆಸಿದರು.

11 ಗಂಟೆಯ ವೇಳೆ ಅಗತ್ಯ ಹಾಗೂ ತುರ್ತು ಸೇವೆಗಳ ವಾಹನಗಳ ಸಂಚಾರವನ್ನು ಹೊರತುಪಡಿಸಿ ನಗರ ಬಹುತೇಕ ಸ್ತಬ್ಧಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News