ಲಸಿಕೆ ಲಭ್ಯವಿಲ್ಲವೆಂದರೂ ವೆನ್ಲಾಕ್‌ನಲ್ಲಿ ಲಸಿಕೆಗಾಗಿ ಜನಸಂದಣಿ!

Update: 2021-05-07 08:02 GMT

ಮಂಗಳೂರು, ಮೇ 7: ವೆನ್ಲಾಕ್ ಕೋವಿಡ್ ಲಸಿಕಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಎರಡು ದಿನಗಳ ಕಾಲ ಲಸಿಕೆ ಲಭ್ಯವಿಲ್ಲ ಎಂಬ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟನೆಯ ಹೊರತಾಗಿಯೂ ಅದರ ಅರಿವಿಲ್ಲದೆ ನೂರಾರು ಮಂದಿ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಹಿಂದಿರುಗಿದ ಘಟನೆ ನಡೆದಿದೆ.

ನಗರದ ವೆನ್ಲಾಕ್‌ನ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ ಹಿರಿಯ ನಾಗರಿಕರು, ಪೊಲೀಸ್ ಹಾಗೂ ರೈಲ್ವೇ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಲಸಿಕೆಗಾಗಿ ಆಗಮಿಸಿ ಹಿಂದಿರುಗಿದರು.

‘‘ಬೆಳಗ್ಗೆ 7 ಗಂಟೆಗೆ ಬಂದು ಕಾಯುತ್ತಿದ್ದೇವೆ. ಇಲ್ಲಿ ಯಾರೂ ಇಲ್ಲ. ಲಸಿಕೆ ಲಭ್ಯವಿಲ್ಲ ಎಂದು ಬೋರ್ಡ್ ಇದೆ. ಯಾವಾಗ ಬರಲಿದೆ ಎಂದೂ ಇಲ್ಲ. ಈಗಾಗಲೇ ಪ್ರಥಮ ಡೋಸ್ ತೆಗೆದುಕೊಂಡು 8 ವಾರವಾಗಿದೆ. ನನಗೆ ಸೆಕೆಂಡ್ ಡೋಸ್ ಯಾವಾಗ ಕೊಡುತ್ತೀರಿ’’ ಎಂದು ವೃದ್ಧರೊಬ್ಬರು ಸಿಬ್ಬಂದಿ ಜತೆ ಪ್ರಶ್ನಿಸಿದರು.

ಸಿಬ್ಬಂದಿ ಜತೆ ವಾಗ್ವಾದ

ನಾನು ಬೆಳಗ್ಗೆ 5 ಗಂಟೆಯಿಂದ ಇಲ್ಲಿ ಕಾಯುತ್ತಿದ್ದೇನೆ. ಇಲ್ಲಿ ನೋಡಿದರೆ ಲಸಿಕೆ ಇಲ್ಲ ಎಂದಿದೆ. ನೀವು ಸರಿಯಾಗಿ ಯಾಕೆ ಹೇಳುವುದಿಲ್ಲ. ನಿನ್ನೆ ಬಂದಾಗ ನಾಳೆ ಬನ್ನಿ ಅಂದಿದ್ದರು. ಆದಕ್ಕೆ ಬಂದಿದ್ದು. ಇಂದು ಲಸಿಕೆ ಇಲ್ಲ ಎರಡು ದಿನ ಬಿಟ್ಟು ಬನ್ನಿ ಎಂದರೆ ಅರ್ಥವಿಲ್ಲವೇ? ಏನಿದು ನಿಮ್ಮ ಅವಸ್ಥೆ ಎಂದು ’’ ಇನ್ನೋರ್ವ ಹಿರಿಯ ನಾಗರಿಕರು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಆ ವೇಳೆ ಅಲ್ಲಿಗಾಗಮಿಸಿದ ಲಸಿಕಾ ಕೇಂದ್ರದ ಮುಖ್ಯಸ್ಥೆ ವೈದ್ಯೆ ಡಾ.ಶೈಲಜಾ ಕೇಂದ್ರದ ಎದುರು ಜಮಾಯಿಸಿದ್ದ ಜನರನ್ನು ಸಮಾಧಾನಪಡಿಸಿದರು.

‘‘ನಾವು ಲಸಿಕೆಗಾಗಿ ಕಾಯುತ್ತಿದ್ದೇವೆ. ಇದ್ದಲ್ಲಿ ನೀಡುತ್ತಿದ್ದೆವು. ನಿನ್ನೆಯೇ ಆರೋಗ್ಯಾಧಿಕಾರಿ ಪ್ರಕಟನೆ ನೀಡಿ ಎರಡು ದಿನ ಲಸಿಕೆ ಇಲ್ಲ, ಖಾಲಿಯಾಗಿದೆ. ಬಂದಾಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ’’ ಎಂದು ಡಾ. ಶೈಲಜಾ ಹೇಳಿದಾಗ, ಎರಡು ದಿನ ಬಿಟ್ಟು ಬರುತ್ತೇವೆ. ನಮಗೆ ಟೋಕನ್ ನೀಡಿ ಎಂದು ಅಲ್ಲಿದ್ದ ಮಹಿಳೆಯೊಬ್ಬರು ಕೋರಿಕೊಂಡರು. ಟೋಕನ್ ಮುಂಗಡವಾಗಿ ಯಾರಿಗೂ ನೀಡುವುದಿಲ್ಲ. ಲಸಿಕೆ ಬರುವಾಗ ಮಾಧ್ಯಮದ ಮೂಲಕ ಮಾಹಿತಿ ದೊರೆಯಲಿದೆ. ಆ ಸಂದರ್ಭದಲ್ಲಿ ಕೇಂದ್ರಕ್ಕೆ ಬಂದ ಹಾಗೆ ಟೋಕನ್ ನೀಡಿ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಲಸಿಕೆ ಲಭ್ಯತೆ ಕೊರತೆಯಾಗಿರುವುದರಿಂದ ಎರಡನೇ ಡೋಸ್‌ನವರಿಗೆ ನೀಡಲಾಗುತ್ತದೆ. ಪ್ರಥಮ ಡೋಸ್‌ನವರು ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಸಿಕೊಂಡೇ ಬರಬೇಕು ಎಂದು ಅಲ್ಲಿ ಸೇರಿದ್ದ ಆಕ್ರೋಶಿತ ಜನ ಸಮೂಹವನ್ನು ಸಮಾಧಾನಪಡಿಸಿ ಕಳುಹಿಸಿದರು. ಇದಾಗಿ ಕೆಲ ಸಮಯದ ಬಳಿಕವೂ ಲಸಿಕಾ ಕೇಂದ್ರಕ್ಕೆ ಬರುವವರ ಸಂಖ್ಯೆ ಮುಂದುವರಿದಿತ್ತು.

ಈ ನಡುವೆ 18ರಿಂದ 45 ವರ್ಷದೊಳಗಿನವರು ಪ್ರಥಮ ಡೋಸ್‌ಗಾಗಿ ಆನ್‌ಲೈನ್ ಮಾಡಿಸಿಕೊಂಡವರು ಕೂಡಾ ಲಸಿಕಾ ಕೇಂದ್ರದತ್ತ ಬರುವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಕೆಳಗಿನವರಿಗೆ ಲಸಿಕೆ ಲಭ್ಯವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ. ಫ್ರಂಟ್‌ಲೈನ್ ವರ್ಕರ್ಸ್‌ಗೆ ಆದ್ಯತೆ ನೀಡಿ ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಪಡೆದವರು ದ್ವಿತೀಯ ಡೋಸ್ ಪಡೆಯುವ ಅವಧಿ ಮೀರಿದವರು ಬಹಳಷ್ಟು ಮಂದಿ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಆಗಮಿಸುತ್ತಿದ್ದಾರೆ. ಕೋವ್ಯಾಕ್ಸಿನ್ ಕಳೆದ ಸುಮಾರು ಎರಡು ವಾರಗಳಿಂದ ಲಭ್ಯವಿಲ್ಲ. ಕೋವಿಶೀಲ್ಡ್ ಕೂಡಾ ನಿನ್ನೆ ದ್ವಿತೀಯ ಡೋಸ್‌ನವರಿಗೆ ಮಾತ್ರ ನೀಡಲಾಗಿದೆ. ಈ ನಡುವೆ ಫ್ರಂಟ್‌ಲೈನ್ ವರ್ಕರ್ಸ್ ಆಗಿ ಗುರುತಿಸಿಕೊಂಡಿರುವ ಪೊಲೀಸರು, ಹೋಂಗಾರ್ಡ್ಸ್, ವೈದ್ಯಕೀಯ ಸಿಬ್ಬಂದಿ ಪ್ರಥಮ ಡೋಸ್‌ಗಾಗಿ ಆಗಮಿಸಿ ಹಿಂದಿರುಗುತ್ತಿದ್ದಾರೆ. ಪ್ರಥಮ ಡೋಸ್‌ನವರಿಗೆ ಆನ್‌ಲೈನ್ ಕಡ್ಡಾಯ ಮಾಡಿರುವುದರಿಂದ ಈ ಫ್ರಂಟ್‌ಲೈನ್ ವರ್ಕರ್ಸ್ ಕೂಡಾ ಡೋಸ್‌ಗಾಗಿ ಪರದಾಡುವಂತಾಗಿದೆ.

‘‘ನಮ್ಮ ಹಿರಿಯ ಸಿಬ್ಬಂದಿ ಲಸಿಕೆ ಹಾಕಿ ಬರಲು ಕಳುಹಿಸಿದ್ದಾರೆ. ಪ್ರಥಮ ಡೋಸ್ ಇನ್ನೂ ನಮಗೆ ಸಿಕ್ಕಿಲ್ಲ. ಇಲ್ಲಿ ಬಂದರೆ ಆನ್‌ಲೈನ್ ಬೇಕೆಂದು ಹೇಳುತ್ತಿದ್ದಾರೆ. ನಾವು ಕರ್ತವ್ಯದಲ್ಲಿರುವುದರಿಂದ ನಮಗೆ ಆನ್‌ಲೈನ್ ಅಥವಾ ಟೋಕನ್ ವ್ಯವಸ್ಥೆ ಇಲ್ಲದೆ ನೀಡಿದರೆ ಉತ್ತಮ’’ ಎಂದು ಹೋಂಗಾರ್ಡ್‌ನ ಮಹಿಳಾ ಸಿಬ್ಬಂದಿಯೊಬ್ಬರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News