ಬುದ್ಧಿವಂತರ ಜಿಲ್ಲೆಯಲ್ಲಿ ಆಗ ಹಿಂದೇಟು... ಈಗ ದುಂಬಾಲು!

Update: 2021-05-07 11:04 GMT

► ಲಸಿಕೆ ಕೊರತೆ ಬಗ್ಗೆ ತಿಳಿಸುವುದೇ ಆಶಾ ಕಾರ್ಯಕರ್ತೆಯರಿಗೆ ಸವಾಲು

ಮಂಗಳೂರು: ಕೊರೋನ ಸೋಂಕು ನಿರೋಧಕ ಲಸಿಕೆಯನ್ನು ಪಡೆಯಲು ಆಗ ಹಿಂದೇಟು ಹಾಕಿದವರು ಈಗ ಹಾಕಿಸಿಕೊಳ್ಳಲು ದುಂಬಾಲು ಬೀಳುತ್ತಿರುವ ದೃಶ್ಯ ಜಿಲ್ಲಾದ್ಯಂತ ಸಾಮಾನ್ಯವಾಗಿದೆ.

ಜಿಲ್ಲೆಯ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಮತ್ತು ಉಪಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವ ವ್ಯವಸ್ಥೆ ಕಲ್ಪಿಸಿ ಲಸಿಕೆ ಪಡೆಯಿರಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದರೂ ಸ್ಪಂದಿಸದ ಜನರು ಇದೀಗ ಕೊರೋನ 2ನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಲಸಿಕೆ ಪಡೆಯಲು ದುಂಬಾಲು ಬಿದ್ದಿದ್ದಾರೆ.

 ಕಳೆದ ಬಾರಿ ಕೊರೋನ ಸೋಂಕಿನ ಹಿನ್ನಲೆಯಲ್ಲಿ ಲಾಕ್‌ಡೌನ್‌ಗೊಳಗಾಗಿದ್ದ ಜನರು ಈ ಬಾರಿಯೂ ಲಾಕ್‌ಡೌನ್ ವಿಧಿಸಲ್ಪಟ್ಟರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಲಸಿಕೆ ಪಡೆಯಲು ಹಾತೊರೆಯುತ್ತಿದ್ದಾರೆ. ಆನ್‌ಲೈನ್ ನೋಂದಣಿ ಮಾಡುವುದು, ಸಂದೇಶಕ್ಕಾಗಿ ಕಾಯುವುದು, ಆಸ್ಪತ್ರೆ-ಆರೋಗ್ಯ ಕೇಂದ್ರಗಳ ಬಾಗಿಲು ಬಡಿಯುವುದು, ಖಾಸಗಿ ಅಥವಾ ಬಾಡಿಗೆ ವಾಹನಗಳಲ್ಲಿ ಲಸಿಕೆ ಪಡೆಯಲು ಅಲೆದಾಡುವುದು ಸಾಮಾನ್ಯವಾಗಿದೆ.

ಆರಂಭದಲ್ಲಿ ‘ಲಸಿಕೆ’ಯಿಂದ ಅಡ್ಡಪರಿಣಾಮ ಬೀರಬಹುದು ಎಂದು ಆತಂಕಿಸಿದ್ದ ಜನತೆ ಇದೀಗ ಕೊರೋನ 2ನೇ ಅಲೆಯ ಆರ್ಭಟ ಕಂಡು ಲಸಿಕೆ ಪಡೆಯಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ

ಮಾರ್ಚ್ ತಿಂಗಳ ಆರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಾಗ ನಾವು ಗ್ರಾಮ, ಪಟ್ಟಣಗಳ ಮನೆ ಮನೆಗಳಿಗೆ ತೆರಳಿದ್ದೆವು. ಸರಕಾರದಿಂದ ನಮಗೂ ನಿರ್ದಿಷ್ಟ ಗುರಿ ನೀಡಲಾಗಿತ್ತು. ಆದರೆ ಬಹುತೇಕ ಮಂದಿ ಲಸಿಕೆ ಹಾಕಲು ಹಿಂದೇಟು ಹಾಕಿದ್ದರು. ಅಷ್ಟೇ ಅಲ್ಲ ಬೈದು ಅವಮಾನಿಸುತ್ತಿದ್ದರು. ಈಗ ಹಾಗಲ್ಲ, ಲಸಿಕೆ ಕೊಡಿಸುವಂತೆ ಪೀಡಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಈಗ ಲಸಿಕೆಯೇ ಕಡಿಮೆಯಾಗಿದೆ ಎಂದು ಆಶಾ ಕಾರ್ಯಕರ್ತೆಯರು ಹೇಳಿಕೊಳ್ಳುತ್ತಿದ್ದಾರೆ.

ಕೊರೋನ ಮೊದಲ ಅಲೆಯ ಸಂದರ್ಭ ಕೋವಿಡ್ ಯೋಧರಾಗಿ ಕಾರ್ಯನಿರ್ವಹಿಸಿದ್ದ ‘ಆಶಾ’ ಕಾರ್ಯಕರ್ತೆಯರು ಕ್ಷೇತ್ರ ಕಾರ್ಯಾಚರಣೆ ಸಂದರ್ಭ ಸಾಕಷ್ಟು ಪ್ರತಿರೋಧ ಎದುರಿಸುತ್ತಿದ್ದರು. ಕೊನೆಗೆ ಅವರ ರಕ್ಷಣೆಗೆ ಸರಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಯಿತು. ಕಳೆದ ಬಾರಿ ಎದುರಾಗಿದ್ದ ಸವಾಲುಗಳು ಈ ಬಾರಿ ಅಷ್ಟೇನು ಇಲ್ಲ. ಆದರೆ ಲಸಿಕೆಯ ಕೊರತೆಯಿಂದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ‘ನಮಗೆ ಲಸಿಕೆ ಕೊಡಿಸಿ’ ಎಂದು ಸಾರ್ವಜನಿಕರು ಒತ್ತಡ ಹಾಕುತ್ತಿದ್ದಾರೆ. ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವುದೇ ನಮಗೀಗ ಸಮಸ್ಯೆಯಾಗಿದೆ ಎಂದು ಆಶಾ ಕಾರ್ಯಕರ್ತೆಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ದ.ಕ. ಜಿಲ್ಲೆಗೆ ಮಂಗಳವಾರ ಬೆಂಗಳೂರಿನಿಂದ ತರಿಸಲಾಗಿದ್ದ 7 ಸಾವಿರ ಡೋಸ್ ಲಸಿಕೆಯ ಪೈಕಿ ಬುಧವಾರ 6,425 ಮಂದಿಗೆ ನೀಡಲಾಗಿತ್ತು. ಉಳಿದ 575 ಡೋಸ್ ಲಸಿಕೆ ಗುರುವಾರ ನೀಡಲಾಗಿದೆ. ಹಾಗಾಗಿ ಸದ್ಯ ಜಿಲ್ಲೆಯಲ್ಲಿ ಲಸಿಕೆ ಇಲ್ಲ. ಇನ್ನು ಶೀಘ್ರ ಲಸಿಕೆ ಬರುವ ಸಾಧ್ಯತೆ ಕಡಿಮೆ. ಅತ್ತ ಲಸಿಕೆಗಾಗಿ ದುಂಬಾಲು ಬೀಳುತ್ತಿದ್ದರೂ ಇತ್ತ ಲಸಿಕೆಯ ಕೊರತೆಯು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಮೊದಲು ಕೋವ್ಯಾಕ್ಸಿನ್ ಲಸಿಕೆಯ ಕೊರತೆಯಿತ್ತು. ಈಗ ಕೋವಿಶೀಲ್ಡ್‌ನ ಕೊರತೆಯೂ ಕಾಡುತ್ತಿದೆ. ಲಸಿಕೆ ಇಲ್ಲ ಎಂದರೂ ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಭಾಗದ ಹಲವಾರು ಮಂದಿ ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತ ಸುಳಿದಾಡುತ್ತಿರುವುದು ಕಂಡು ಬಂತು.

1,372 ಕಾರ್ಯಕರ್ತೆಯರು: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತಲಾ 1,000 ಜನರಿಗೆ ಒಬ್ಬರಂತೆ ಹಾಗೂ ನಗರ ಭಾಗದಲ್ಲಿ ತಲಾ 2,500 ಜನರಿಗೆ ಒಬ್ಬರಂತೆ ದ.ಕ. ಜಿಲ್ಲೆಯಲ್ಲಿ 1,372 ಮಂದಿ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಸಿಬ್ಬಂದಿ) ಕಾರ್ಯಕರ್ತೆಯರಿದ್ದಾರೆ. ಇದರಲ್ಲಿ 50 ಮಂದಿ ಸುದಮಕಾರರು (ಫೆಸಿಲಿಟೇಟರ್ಸ್‌) ಕೂಡ ಸೇರಿದ್ದಾರೆ. ಆಶಾ ಕಾರ್ಯಕರ್ತೆಯರು ಕೊರೋನ ನಿಯಂತ್ರಣದಲ್ಲಿ ಸಲ್ಲಿಸಿದ್ದ ಸೇವೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಪ್ರಶಂಸಿಸಿದೆ. ಅಲ್ಲದೆ ಮಾರ್ಚ್‌ನಿಂದ ಕೇಂದ್ರ ಸರಕಾರವು ಆಶಾ ಕಾರ್ಯಕರ್ತೆಯರಿಗೆ 1,000 ರೂ. ಹಾಗೂ ಆಶಾ ಫೆಸಿಲಿಟೇಟರ್ಸ್‌ಗೆ 1,500 ರೂ. ಕೋವಿಡ್ ಪ್ರೋತ್ಸಾಹಧನ ನೀಡುತ್ತಿದೆ. ಈ ಮಧ್ಯೆ ಗೌರವಧನ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಆಶಾ ಕಾರ್ಯಕರ್ತೆಯರು ಸರಕಾರದ ಮುಂದಿಟ್ಟಿದ್ದು, ಅದಿನ್ನೂ ಪೂರ್ಣವಾಗಿ ಈಡೇರಿಲ್ಲ.

ಆಶಾ ಕಾರ್ಯಕರ್ತೆಯರು ಸಾಮಾನ್ಯ ದಿನಗಳಲ್ಲಿ ಗರ್ಭಿಣಿಯರ ನೋಂದಣಿ, ಮಕ್ಕಳ ಲಸಿಕಾ ಕಾರ್ಯಕ್ರಮ ಇತ್ಯಾದಿ ಆರೋಗ್ಯ ಸೇವೆಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷದಿಂದ ಕೊರೋನ ಯೋಧರುಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಹೋಂ ಐಸೋಲೇಶನ್‌ನಿಂದ ಹಿಡಿದು ಲಸಿಕೆ ಹಾಕಿಸುವವರೆಗೂ ವಿವಿಧ ಹಂತದಲ್ಲಿ ಜನಸಾಮಾನ್ಯರ ಜತೆಗಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕೊರೋನ ನಿಯಂತ್ರಣ ಸಂಬಂಧಿ ಕೆಲಸಗಳ ಜತೆಗೆ ಲಾರ್ವಾ ಸಮೀಕ್ಷೆ, ಆರೋಗ್ಯ ಸಮೀಕ್ಷೆಯಲ್ಲಿಯೂ ತೊಡಗಿಕೊಂಡಿದ್ದಾರೆ.

 ಆಶಾ ಕಾರ್ಯಕರ್ತೆಯರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಆರೋಗ್ಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಕಳೆದ ವರ್ಷದಿಂದ ಕೊರೋನ ವಾರಿಯರ್ಸ್‌ಗಳಾಗಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಆಶಾ ಕಾರ್ಯಕರ್ತೆಯರಿಗೆ ಸಹಕಾರ ನೀಡಿದರೆ ಅವರಿಂದ ಇನ್ನಷ್ಟು ಸೇವೆ ನಿರೀಕ್ಷಿಸಬಹುದಾಗಿದೆ.

ಕುಮುದಾ, ‘ಆಶಾ’ ಮೇಲ್ವಿಚಾರಕಿ,ದ.ಕ. ಜಿಲ್ಲೆ

ಆಶಾ ಕಾರ್ಯಕರ್ತೆಯರ ಬಳಿ ಲಸಿಕೆ ಇರುವುದಿಲ್ಲ. ಅವರು ಲಸಿಕೆ ಹಾಕಿಸಿಕೊಳ್ಳುವವರಿಗೆ ನೆರವು ನೀಡುತ್ತಾರಷ್ಟೆ. ಜಿಲ್ಲೆಯಲ್ಲಿ ಎರಡನೇ ಡೋಸ್ ಪಡೆಯಬೇಕಾಗಿರುವವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಲಭ್ಯತೆ ಆಧಾರದಲ್ಲಿ ಮುಂದೆ ಎಲ್ಲರಿಗೂ ಲಸಿಕೆ ಸಿಗುತ್ತದೆ. ಹಾಗಾಗಿ ಯಾವ ಕಾರಣಕ್ಕೂ ಲಸಿಕೆಗಾಗಿ ಆಶಾ ಕಾರ್ಯಕರ್ತೆಯರನ್ನು ಒತ್ತಾಯಿಸಬಾರದು.

ಡಾ.ರಾಜೇಶ್,

ಆರ್ ಸಿ ಎಚ್ ಅಧಿಕಾರಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News