ಕೊರೋನ ಸೋಂಕು : ಉಳ್ಳಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಸಭೆ

Update: 2021-05-07 16:27 GMT

ಮಂಗಳೂರು, ಮೇ 7: ಹೋಂ ಐಸೋಲೇಟ್ ಆಗಿರುವ ಕೋವಿಡ್ ಸೋಂಕಿತರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಲು ಸಾಧ್ಯವಾಗದಿದ್ದರೆ ಅಂತಹವರನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್‌ಗಳಿಗೆ ವರ್ಗಾಯಿಸುವ ಕೆಲಸವನ್ನು ಗ್ರಾಮಮಟ್ಟದ ಟಾಸ್ಕ್‌ಫೋರ್ಸ್ ಮತ್ತು ವಾರ್ಡ್ ಸಮಿತಿಗಳು ಮಾಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ಪ್ರತ್ಯೇಕ ಕೋಣೆಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿರಲು ಸಾಧ್ಯವಾಗದ ಸ್ಥಿತಿ ಇದ್ದರೆ ಅಂತಹ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಬೇಕು. ಸೋಂಕಿತರು ಮುನ್ನೆಚ್ಚರಿಕೆ ವಹಿಸದಿದ್ದರೆ ಮನೆಯರುವ ಇತರರಿಗೂ ಸೋಂಕು ಹರಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್ ಮತ್ತು ವಾರ್ಡ್ ಸಮಿತಿಯ ಸದಸ್ಯರು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಸಭೆ ನಡೆಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಬಂದಿರುವ ವರದಿಯನ್ನು ಪಡೆದು ಏನೆಲ್ಲ ಕ್ರಮಗಳು ತೆಗೆದುಕೊಳ್ಳಬೇಕು. ಕೋವಿಡ್ ಸೋಂಕಿ ನಿಂದ ಮರಣ ಹೊಂದಿದವರ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಜಾಗವನ್ನು ಗುರುತಿಸಿಡಬೇಕು ಮತ್ತು ಸರಕಾರವೇ ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಲಿದೆ ಎಂದರು.

ಶಾಸಕ ಯುಟಿ ಖಾದರ್ ಮಾತನಾಡಿ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ಅದರ ಫಲಿತಾಂಶ ಬರುವವರೆಗೂ ಅಂತಹವರು ಹೋಂ ಕ್ವಾರಂಟೈನ್‌ನಲ್ಲಿ ರಬೇಕು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವರನ್ನು ಪ್ರತಿದಿನ ಆಶಾ ಕಾರ್ಯಕರ್ತೆ ಯರು ಹಾಗೂ ಆರೋಗ್ಯ ಸಿಬ್ಬಂದಿ ವರ್ಗವು ಯೋಗಕ್ಷೇಮ ವಿಚಾರಿಸಬೇಕು ಎಂದರು.

ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ. ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.

ಕೇರಳದಲ್ಲಿ ಲಭ್ಯವಿಲ್ಲದ ಮತ್ತು ಅನಿವಾರ್ಯವಾಗಿರುವ ಚಿಕಿತ್ಸೆಗಳಿಗೆ ಮಾತ್ರ ಮಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ತೀವ್ರವಲ್ಲದ ಚಿಕಿತ್ಸೆಗಾಗಿ ಮಂಗಳೂರು ಪ್ರವೇಶಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News