ಪುದುಚೇರಿ: ಮುಖ್ಯಮಂತ್ರಿಯಾಗಿ ಎನ್ ರಂಗಸಾಮಿ ಪ್ರಮಾಣವಚನ

Update: 2021-05-07 17:51 GMT

ಪುದುಚೇರಿ, ಮೇ 7: ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ಮುಖ್ಯಸ್ಥ ಎನ್ ರಂಗಸಾಮಿ ಅವರು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸಾಯ್ ಸೌಂದರ ರಾಜನ್ ಮುಖ್ಯಮಂತ್ರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿರುವ ರಂಗಸಾಮಿ ತಮಿಳಿನಲ್ಲಿ ಮತ್ತು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. 30 ಸ್ಥಾನಗಳಿರುವ ಪುದುಚೇರಿ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 16 ಸ್ಥಾನ ಗೆದ್ದು ಬಹುಮತ ಪಡೆದಿದೆ.

ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇವಲ 5 ನಿಮಿಷದಲ್ಲಿ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯವಾಗಿದ್ದು ಬಳಿಕ  ಪ್ರಧಾನಿ ನರೇಂದ್ರ ಮೋದಿ ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದರು. ಜನವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ 

ಸೇರ್ಪಡೆಯಾಗಿರುವ ಎ.ನಮಶಿವಾಯಂ ಅವರು ಉಪಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News