ಪಂಜಾಬ್: ಲಾಕ್ ಡೌನ್ ವಿರೋಧಿಸಿ ರೈತರಿಂದ ಶನಿವಾರ ಬೀದಿ ಪ್ರತಿಭಟನೆಯ ಎಚ್ಚರಿಕೆ

Update: 2021-05-07 18:20 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮೇ 7: ಪಂಜಾಬಿನಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೀಘ್ರವೇ 10,000 ತಲುಪಲಿದೆ ಎಂದು ತಜ್ಞರ ಎಚ್ಚರಿಕೆಯ ಹೊರತಾಗಿಯೂ ರಾಜ್ಯದಲ್ಲಿ ಕೊರೋನವೈರಸ್ ಲಾಕ್ ಡೌನ್ ಹೇರಿಕೆಯನ್ನು ವಿರೋಧಿಸಿ ಶನಿವಾರ ಬೀದಿಗಿಳಿದು ಪ್ರತಿಭಟಿಸುವುದಾಗಿ ಈಗಾಗಲೇ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಬೆದರಿಕೆಯೊಡ್ಡಿವೆ. ರೈತರ ಈ ಬೆದರಿಕೆ ರಾಜ್ಯ ಸರಕಾರವನ್ನು ಆತಂಕಕ್ಕೆ ತಳ್ಳಿದೆ.

ಅಲ್ಲದೆ,ಅಗತ್ಯವಲ್ಲದ ಸಾಮಗ್ರಿಗಳ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಪಂಜಾಬ ಸರಕಾರದ ಆದೇಶವನ್ನು ಧಿಕ್ಕರಿಸಲು ರಾಜ್ಯದಲ್ಲಿಯ ಹಲವಾರು ವ್ಯಾಪಾರಿ ಸಂಘಗಳೂ ನಿರ್ಧರಿಸಿವೆ.

ರಾಜ್ಯದಲ್ಲಿ ಕೊರೋನವೈರಸ್ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪಂಜಾಬ ಸರಕಾರವು ಲಾಕ್ಡೌನ್ ಅನ್ನು ಜಾರಿಗೊಳಿಸಿದೆ ಎಂದು ಹೇಳಿದ ಸಂಯುಕ್ತ ಕಿಸಾನ ಮೋರ್ಚಾ (ಎಸ್ಕೆಎಂ)ದ ನಾಯಕ ಬಲಬೀರ ಸಿಂಗ್ ರಾಜೆವಾಲ್ ಅವರು,ಲಾಕ್ ಡೌನ್  ವಿರುದ್ಧ ಪ್ರತಿಭಟನೆ ನಡೆಸಲು ಎಸ್ಕೆಎಂ ನಿರ್ಧರಿಸಿದ್ದು,ಸಂಘಟನೆಯ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ ಮತ್ತು ತಮ್ಮ ಅಂಗಡಿಗಳನ್ನು ತೆರೆಯುವಂತೆ ಹಾಗೂ ಲಾಕ್ ಡೌನ್  ಮಾರ್ಗಸೂಚಿಗಳನ್ನು ಪಾಲಿಸದಂತೆ ಜನರನ್ನು ಕೋರಲಿದ್ದಾರೆ ಎಂದು ತಿಳಿಸಿದರು. ರೈತರು ಎಸ್ಕೆಎಂ ನೇತೃತ್ವದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಅಗತ್ಯವಾದರೆ ಎಸ್ಕೆಎಂ ಲಾಕ್ ಡೌನ್  ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನೂ ನಡೆಸಲಿದೆ ಎಂದು ಸಿಂಗ್ ತಿಳಿಸಿದರು.
ಪಂಜಾಬಿನಲ್ಲಿ ಪ್ರತಿದಿನ ಸುಮಾರು 9,000 ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಸರಕಾರವು ಮೇ 15ರವರೆಗೆ ವಾರಾಂತ್ಯದ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂಗಳಂತಹ ಕ್ರಮಗಳ ಜೊತೆಗೆ ಕಠಿಣ ನಿರ್ಬಂಧಗಳನ್ನೂ ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News