ಕೇರಳದಲ್ಲಿ ಇಂದಿನಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್

Update: 2021-05-08 07:06 GMT

ಕಾಸರಗೋಡು : ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಇಂದಿನಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಜನರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನ್ನು ಪಾಲಿಸುವ ದೃಶ್ಯ ಆರಂಭದ ಗಂಟೆಗಳಲ್ಲಿ ಕಂಡುಬರುತ್ತಿದೆ.  ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಕಂಡು ಬರುತ್ತಿದ್ದು,  ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರ ಇಲ್ಲದೆ ಸಂಚರಿಸಿದ್ದಲ್ಲಿ  ವಾಹನ ಜಪ್ತಿ  ಅಥವಾ ದಂಡ  ವಸೂಲಿ ಮಾಡಲಾಗುತ್ತಿದೆ.  ಪೊಲೀಸ್ ಪಾಸ್ ಹೊಂದಿದವರಿಗೆ ಮಾತ್ರ ಇನ್ನು ಮುಂದೆ ಸಂಚಾರಕ್ಕೆ ಅನುಮತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ  ಸಂಚರಿಸಲು ಪ್ರಮಾಣ ಪತ್ರ  ಹೊಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರ.

ಅಗತ್ಯ ಸೇವೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ

ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ದಿನಸಿ , ಹಣ್ಣು  ಹಂಪಲು , ತರಕಾರಿ , ಹಾಲು , ಮಾಂಸ, ಮೀನು ಮಾರಾಟಕ್ಕೆ ಅನುಮತಿನೀಡಲಾಗಿದೆ. ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಅಂಗಡಿ, ಹೋಟೆಲ್ ಗಳು  ಬೆಳಿಗ್ಗೆ 6 ರಿಂದ ಸಂಜೆ 7.30ರ ತನಕ ತೆರೆಯಬಹುದು. ಬ್ಯಾಂಕ್ ಗಳು ವಾರದಲ್ಲಿ ಮೂರು ದಿನ ತೆರೆಯಬಹುದು. ಬೆಳಗ್ಗೆ 10 ರಿಂದ 1 ಗಂಟೆ ತನಕ ತೆರೆಯಬಹುದಾಗಿದೆ.

ಗ್ಯಾರೇಜ್ ಗಳಿಗೆ ವಾರದ ಕೊನೆಯ ಎರಡು ದಿನ ತೆರೆಯಬಹುದು. ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಪ್ರವೇಶ ಇಲ್ಲ. ಪೂರ್ವ ನಿಗದಿತ ವಿವಾಹಗಳಿಗೆ 50 ಮಂದಿಗೆ ಮಾತ್ರ ಅವಕಾಶ. ಅಂತ್ಯಕ್ರಿಯೆಗೆ 20 ಮಂದಿ ಮಾತ್ರ. ಬಾರ್, ಶೇಂದಿ ಅಂಗಡಿ ಬಂದ್  ಮಾಡಲಾಗಿದೆ. ಸರಕು  ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಗೂಡಂಗಡಿ ತೆರೆಯುವಂತಿಲ್ಲ. ಹೊರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರು ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾಯಿಸಬೇಕು. 14 ದಿನ ಕ್ವಾರಂಟೈನ್ ನಲ್ಲಿರಬೇಕು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News