ಮಂಗಳೂರು: ಕೊರೋನದಿಂದ ಮೃತಪಟ್ಟ ನಾಲ್ಕು ಮಂದಿಯ ಅಂತ್ಯಕ್ರಿಯೆ ನಡೆಸಿದ ಟೀಂ-ಬಿ ಹ್ಯೂಮೆನ್, ಐವೈಸಿ ಯೂತ್ ತಂಡ

Update: 2021-05-08 09:58 GMT

ಮಂಗಳೂರು : ಕೊರೋನ ಸೋಂಕಿತ ಮೃತದೇಹದ ಬಳಿ ಆಪ್ತ ಸಂಬಂಧಿಕರೂ ಸುಳಿದಾಡದ ಸನ್ನಿವೇಶದಲ್ಲಿ ಮೃತರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಮಂಗಳೂರಿನ ಟೀಂ- ಬಿ ಹ್ಯೂಮನ್ ಹಾಗೂ ಟೀಂ ಐವೈಸಿ ಯೂತ್ ತಂಡ ಮಾನವೀಯತೆ ಮೆರೆದಿದೆ.

ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿನಿಂದ ಮೃತರ ದೇಹವನ್ನು ಸಂಬಂಧಿಕರೇ ಮುಟ್ಟಲು ಭಯಪಟ್ಟಾಗ, ಅಲ್ಲಿಗೆ ಧಾವಿಸಿದ 'ಟೀಂ-ಬಿ ಹ್ಯೂಮನ್' ಇದರ ಆಸಿಫ್ ಡೀಲ್ಸ್ ಮತ್ತು ಅವರ ಸಹೋದರ ಐವೈಸಿ ಯೂತ್ ತಂಡದ ಸುಹೈಲ್ ಕಂದಕ್ ನಾಲ್ಕು ಮೃತದೇಹಗಳನ್ನು ಬೊಳಾರು, ಕದ್ರಿ, ನಂದಿಗುಡ್ಡೆಯ ಸ್ಮಶಾನದಲ್ಲಿ ಗೌರವಪೂರ್ಣವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಟೀಂ ಬಿ ಹ್ಯೂಮೆನ್ ತಂಡವು ನಗರದ ಆಸ್ಪತ್ರೆಗಳು ಮತ್ತು ರೋಗಿಗಳೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿದೆ. ಪ್ರತೀ ದಿನ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ನಡೆಸುತ್ತಿದೆ.

ಮಂಗಳೂರಿನಲ್ಲಿ ಕೊರೋನ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಮೃತರ ಸಂಖ್ಯೆಯು ಅಧಿಕವಾಗುತ್ತಿದೆ. ಐಸಿಯು ಮತ್ತು ವೆಂಟಿಲೇಟರ್ ಇಲ್ಲದೇ ಆ್ಯಬುಲೆನ್ಸ್  ನಲ್ಲಿ ಉಸಿರಾಡಲು ಸಾಧ್ಯವಾಗದೆ ಕೊನೆಯುಸಿರೆಳೆಯುವ ದುರಂತವೂ ನಡೆಯುತ್ತಿದೆ. ಹಾಗಾಗಿ ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಮೃತಪಟ್ಟ ವ್ಯಕ್ತಿಗಳ ಶವವನ್ನೂ ಅವರ ಸಂಬಂಧಿಕರು‌ ಮುಟ್ಟಲು ಭಯಪಡುವಂತಹ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುರಕ್ಷಿತಗೊಳಿಸಬೇಕಾದ ಅಗತ್ಯವಿದೆ ಎಂದು ಆಸಿಫ್ ಡೀಲ್ಸ್ ತಿಳಿಸಿದ್ದಾರೆ.

ಬೆಂಗಳೂರು, ಬೆಳ್ತಂಗಡಿ, ಮಂಗಳಾದೇವಿ, ಕಂದಾವರ ಗುರುಪುರದ ಮೃತ ನಾಲ್ಕು ವ್ಯಕ್ತಿಗಳ ಅಂತಿಮ ಸಂಸ್ಕಾರ ಮಾಡಿರುವ ಟೀಂ - ಹ್ಯೂಮೆನ್ ನ ತಂಡದಲ್ಲಿ ಆಸಿಫ್ ಡೀಲ್ಸ್, ಅಶ್ರಫ್ ಕಂದಕ್, ಇಮ್ರಾನ್, ಅಹ್ನಾಫ್ ಡೀಲ್ಸ್, ವಾಹಿದ್ ಹಾಗೂ ಐವೈಸಿ ಯೂತ್  ತಂಡದಲ್ಲಿ ಸುಹೈಲ್ ಕಂದಕ್, ಲುಕ್ಮಾನ್, ಹಸನ್ ಡೀಲ್ಸ್,  ದೀಕ್ಷಿತ್, ಅಪ್ಪಿ, ಬಾಚಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News