ವೀಕೆಂಡ್ ಕರ್ಫ್ಯೂ ದ.ಕ.ಜಿಲ್ಲೆ ಸ್ತಬ್ಧ: ಪೊಲೀಸರಿಂದ ಬಿಗಿ ತಪಾಸಣೆ

Update: 2021-05-08 11:03 GMT

ಮಂಗಳೂರು, ಮೇ 8: ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಆರಂಭಗೊಂಡಿದ್ದು, ಇಂದು ಬೆಳಗ್ಗಿನಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆ ಬಹುತೇಕ ಸ್ತಬ್ಧಗೊಂಡಿತ್ತು. ಮಧ್ಯಾಹ್ನ 11 ಗಂಟೆಯ ಬಳಿಕ ಮಂಗಳೂರು ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಅನಗತ್ಯ ವಾಹನಗಳ ಓಡಾಟ ಸಾಕಷ್ಟು ಕಡಿಮೆಯಾಗಿದ್ದು, ಹಾಗಿದ್ದರೂ ಜಿಲ್ಲೆಯಾದ್ಯಂತ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದರು.

ಔಷಧಿ ಹಾಗೂ ಆಸ್ಪತ್ರೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ವೀಕೆಂಡ್ ಕರ್ಫ್ಯೂ ನಿಮಿತ್ತ ನಿರ್ಬಂಧಿಸಲಾಗಿರುವ ಹಿನ್ನೆಲೆಯಲ್ಲಿ ಜನರ ಅನಗತ್ಯ ಓಡಾಟಕ್ಕೂ ಕಡಿವಾಣ ಬಿದ್ದಿದೆ. ಕೆಲವೊಂದು ಕೂಲಿ ಕಾರ್ಮಿಕರು ಮಾತ್ರ ನಿರ್ಮಾಣ ಚಟುವಟಿಕೆಗಾಗಿ ನಡೆದಾಡಿ ಸಾಗುವುದು ಕಂಡು ಬಂತಾದರೂ, ಬೆಳಗ್ಗಿನ ಹೊತ್ತು ಕೆಲವರು ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳಲ್ಲಿ ಸಾಗುವವರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದರು.

ನಗರದಲ್ಲಿ ತುರ್ತು ಸೇವೆ ಹಾಗೂ ಅಗತ್ಯ ಸೇವೆಗಳ ಲಘು ಹಾಗೂ ಘನ ವಾಹನಗಳು ಸಂಚಾರ ನಡೆಸುತ್ತಿದ್ದು, ಇದೇ ವೇಳೆ ಲಸಿಕೆ ಹಾಕುವವರಿಗೆ ವೆನ್‌ಲಾಕ್ ಲಸಿಕಾ ಕೇಂದ್ರ ಸೇರಿದಂತೆ ನಗರ ಹಾಗೂ ತಾಲೂಕಿನ ಇತರ ಲಸಿಕಾ ಕೇಂದ್ರಗಳಲ್ಲಿ ಓಡಾಟಕ್ಕೆ ಅವಕಾಶ ಕಲ್ಪಿಸಲಾಯಿತು.

ಬೆಳಗ್ಗೆ 6ರಿಂದ 9 ಗಂಟೆವರೆಗೆ ಹಾಲು, ದಿನಪತ್ರಿಕೆ ಹಾಗೂ ಹಾಪ್‌ಕಾಮ್ಸ್‌ಗಳಿಗೆ ಕಾರ್ಯಾಚರಿಸಲು ಅನುಮತಿಸಲಾಗಿದ್ದರೂ ಗ್ರಾಹಕರ ಸಂಖ್ಯೆ ಅತೀ ಕಡಿಮೆಯಾಗಿತ್ತು. ಆನ್‌ಲೈನ್ ಸೇವಾ ಪೂರೈಕೆದಾರರಿಗೆ ಸ್ವಿಗ್ವಿ ಹಾಗೂ ರೊಮ್ಯಾಟೋ ಮತ್ತಿತರ ಆಹಾರ ಪೂರೈಕೆ ಸಂಸ್ಥೆಗೆ ಆಹಾರ ಒದಗಿಸಲು ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಅಡುಗೆ ಮನೆಯನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆಯಾದರೂ ಅಂತಹ ಆಹಾರ ಪೂರೈಕೆದಾರರ ಓಡಾಟವು ಇಂದು ಕ್ಷೀಣಿಸಿತ್ತು.

ಲಸಿಕೆಗಾಗಿ ಮುಂದುವರಿದ ಪರದಾಟ

‘‘ನಾನು ಫಸ್ಟ್ ಡೋಸ್‌ಗಾಗಿ ಕಳೆದ ಹಲವಾರು ದಿನಗಳಿಂದ ಅಲೆದಾಡುತ್ತಿದ್ದೇನೆ. ಆನ್‌ಲೈನ್ ನೋಂದಣಿ ಮಾಡಿಸಿದರೂ ಅದು ರದ್ದಾಗಿದೆ. ಅದಕ್ಕಾಗಿ ಫಸ್ಟ್ ಡೋಸ್ ಹೇಗೂ ಸಿಗುತ್ತಿಲ್ಲವಲ್ಲ, ಅದಕ್ಕಾಗಿ ಸೆಕೆಂಡ್ ಡೋಸ್ ಪಡೆಯಲು ಟೋಕನ್ ಪಡೆದುಕೊಂಡಿದ್ದೇನೆ’’ ಎಂದು ಮಧ್ಯವಯಸ್ಕರೊಬ್ಬರು ಹತಾಶೆಯಿಂದ ಟೋಕನ್ ಪಡೆದು ಕಾಯುತ್ತಿರುವ ದೃಶ್ಯ ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಕಂಡು ಬಂತು. ಫಸ್ಟ್ ಡೋಸ್ ಪಡೆಯದೆ ಸೆಕೆಂಡ್ ಡೋಸ್ ಪಡೆಯಲಾಗುವುದಿಲ್ಲ. ಒಳಗಡೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡುವಾಗ ಅದು ತಿರಸ್ಕರಿಸಲ್ಪಡುತ್ತದೆ ಎಂದು ಸಮಜಾಯಿಸಲು ಪ್ರಯತ್ನಿಸಿದರೆ ‘‘ ನೋಡೋಣ ಒಳಗೆ ಹೋಗಿ ಏನಾಗುತ್ತದೆ ಎಂದು. ಫಸ್ಟ್ ಡೋಸ್ ಇಲ್ಲದಿದ್ದರೆ ಪರವಾಗಿಲ್ಲ, ನಾನು ಸೆಕೆಂಡ್ ಆದರೂ ಸಿಗಲಿ’’ ಎಂದು ಆ ವ್ಯಕ್ತಿ ಪ್ರತಿಕ್ರಿಯಿಸಿದರು.

ಗುರುವಾರ ಸಂಜೆ ಪತ್ರಿಕಾ ಪ್ರಕಟನೆಯನ್ನು ನೀಡಿದ್ದ ಜಿಲ್ಲಾ ಆರೋಗ್ಯ ಇಲಾಖೆ, ಲಸಿಕೆ ಲಭ್ಯವಿಲ್ಲದ ಕಾರಣ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಕೇಂದ್ರದಲ್ಲಿ ಲಸಿಕೀಕರಣ ಇರುವುದಿಲ್ಲ. ಒಂದು ವೇಳೆ ಈ ಅವಧಿಯಲ್ಲಿ ಲಸಿಕೆ ಬಂದಲ್ಲಿ ಮಾಹಿತಿಯನ್ನು ನೀಡಲಾಗುವುದು ಎಂದೂ ಹೇಳಿತ್ತು. ಹಾಗಾಗಿ ಶುಕ್ರವಾರ ಲಸಿಕೀಕರಣ ಶಿಬಿರ ನಡೆದಿರಲಿಲ್ಲ. ಸಂಜೆಯ ವೇಳೆ ಸುಮಾರು 3400ರಷ್ಟು ಕೋವಿಶೀಲ್ಡ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದ್ದು, ಅದನ್ನು ತಾಲೂಕು ಸೇರಿದಂತೆ ನಗರದ ಲಸಿಕಾ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಅದರಂತೆ ಇಂದು ವೆನ್‌ಲಾಕ್‌ ನಲ್ಲಿ 380 ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಅದು ಕೇವಲ ಸೆಕೆಂಡ್ ಡೋಸ್‌ನವರಿಗೆ ಮಾತ್ರ.

ಬೆಳಗ್ಗೆ 7 ಗಂಟೆಗೆ ಟೋಕನ್‌ಗಾಗಿ ಕ್ಯೂ!

ಲಸಿಕಾ ಕೇಂದ್ರದಲ್ಲಿ ಲಸಿಕೀಕರಣ ಆರಂಭವಾಗುವುದೇ ಬೆಳಗ್ಗೆ 9 ಗಂಟೆಗೆ. ಸುಮಾರು 15ರಿಂದ 20 ನಿಮಿಷ ಮುಂಚಿತವಾಗಿ ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಟೋಕನ್ ನೀಡುವ ವ್ಯವಸ್ಥೆ ಆರಂಭವಾಗುತ್ತದೆ. ಆದರೆ ಲಸಿಕೆಗಾಗಿ ಬೆಳಗ್ಗೆ 9 ಗಂಟೆಯ ವೇಳೆಗೆ ಹಿರಿಯ ನಾಗರಿಕರು ಸೇರಿದಂತೆ ಫ್ರಂಟ್ ಲೈನ್ ವರ್ಕಸ್, ಜನಸಾಮಾನ್ಯರು ಲಿಸಿಕಾ ಕೇಂದ್ರಗಳಿಗೆ ಆಗಮಿಸುತ್ತಾರೆ.ಇಂದು ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸೀಕರಣ ನೋಡಲ್ ಅಧಿಕಾರಿ ಡಾ. ರಾಜೇಶ್ ಅವರೇ ಖುದ್ದು ಹಾಜರಿದ್ದು, ಲಸಿಕೆಗಾಗಿ ಬಂದವರಿಗೆ ಮಾಹಿತಿ ನೀಡುತ್ತಾ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರು. ಹಾಗಿದ್ದರೂ ಲಸಿಕಾ ಕೇಂದ್ರಕ್ಕೆ ಸರಾಗವಾಗಿ ಬಹುತೇಕವಾಗಿ ಹಿರಿಯ ವಯಸ್ಕರೇ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಕೋವ್ಯಾಕ್ಸಿನ್ ಸೆಕೆಂಡ್ ಡೋಸ್‌ಗಾಗಿ ಪರದಾಟಈಗಾಗಲೇ ಕೋವ್ಯಾಕ್ಸಿನ್ ಪ್ರಥಮ ಡೋಸ್ ನಗರದ ಖಾಸಗಿ ಮಾತ್ರವಲ್ಲದೆ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಹಾಕಿಸಿಕೊಂಡವರು ಆರು ವಾರಗಳು ಕಳೆದವರು ಲಸಿಕಾ ಕೇಂದ್ರಗಳಿಗೆ ಆಗಮಿಸಿ ಹಿಂತಿರುಗುತ್ತಿದ್ದಾರೆ. ಹಿರಿಯ ವಯಸ್ಕರು ಆತಂಕದಿಂದಲೇ ಸಿಬ್ಬಂದಿ, ಅಧಿಕಾರಿಗಳಿಗಳಲ್ಲಿ ಈಗಾಗಲೇ ದ್ವಿತೀಯ ಲಸಿಕಾ ಡೋಸ್ ಪಡೆಯುವ ಅವಧಿ ಮೀರಿದೆ. ನಮಗೆ ಏನಾದರೂ ತೊಂದರೆಯಾಗುವುದಿಲ್ಲವಲ್ಲಾ ಎಂದು ಪ್ರಶ್ನಿಸುತ್ತಿದ್ದಾರೆ.ವೆನ್‌ಲಾಕ್ ಲಸಿಕಾ ಕೇಂದ್ರದಲ್ಲಿ ಇಂದು ಕೂಡಾ ಕೋವ್ಯಾಕ್ಸಿನ್ ಸೆಕೆಂಡ್ ಡೋಸ್‌ಗಾಗಿ ಹಲವಾರು ಮಂದಿ ಆಗಮಿಸಿ ಹಿಂತಿರುಗಿದರು. ಅಲ್ಲಿದ್ದ ಡಾ. ರಾಜೇಶ್ ಅವರು ಅವರು, ‘‘6ರಿಂದ ಎಂಟು ವಾರಗಳ ಕಾಲ ಸೆಕೆಂಡ್ ಡೋಸ್ ಹಾಕಿಸಿಕೊಳ್ಳಬಹುದು. ಸದ್ಯ ಕೋವ್ಯಾಕ್ಸಿನ್ ಜಿಲ್ಲೆಗೆ ಪೂರೈಕೆಯಾಗಿಲ್ಲ. ಬಂದಾಕ್ಷಣ, ಈಗಾಗಲೇ ಪಡೆದಿರುವವರ ಪಟ್ಟಿಯನುಸಾರ ಸಂಬಂಧಪಟ್ಟವರಿಗೆ ಲಸಿಕೆ ಪಡೆದ ಆದ್ಯತೆಯ ನೆಲೆಯಲ್ಲಿ ಸಂದೇಶ ಕಳುಹಿಸಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು ’’ ಎಂದು ಸಮಾಧಾನಿಸಿ ಕಳುಹಿಸಿದರು.

ಮನಪಾ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್ ಕೂಡಾ ವೆನ್‌ಲಾಕ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೀಕರಣ ವ್ಯವಸ್ಥೆಯನ್ನು ಪರಿಶೀಲಿಸುವ ಜತೆಗೆ ಕೇಂದ್ರದಲ್ಲಿ ಲಸಿಕೆ ಪಡೆಯುವ ಆತಂಕದಿಂದ ಸುರಕ್ಷಿತ ಅಂತರವನ್ನು ಮರೆತು ತಮ್ಮ ಸರದಿಗಾಗಿ ಕಾಯುತ್ತಿದ್ದವರಿಗೆ ತಿಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News