ಉಡುಪಿ ಜಿಲ್ಲೆಯಲ್ಲಿ ಕೊವೀಡ್ ಲಸಿಕೆಗೆ ಹೆಚ್ಚಿದ ಬೇಡಿಕೆ: ಮೊದಲ ಡೋಸ್ ಪಡೆದು ಅವಧಿ ಮುಗಿದವರ ಸಂಖ್ಯೆ 50 ಸಾವಿರ !

Update: 2021-05-08 11:54 GMT

ಉಡುಪಿ, ಮೇ 8: ಕೊರೋನ ಲಸಿಕೆಯ ಕೊರತೆ ಮಧ್ಯೆ ಉಡುಪಿ ಜಿಲ್ಲೆ ಯಲ್ಲಿ ಅವಧಿ ಮುಗಿದ ಮತ್ತು ಅವಧಿ ಮೀರಿದ ಸುಮಾರು 50ಸಾವಿರ ಮಂದಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಪಡೆಯಲು ಕಾಯುತ್ತಿದ್ದಾರೆ. ಪೂರೈಕೆಯಾಗುವ ಲಸಿಕೆಯಲ್ಲಿ ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡುತ್ತಿರುವುದರಿಂದ ಮೊದಲ ಡೋಸ್ ಪಡೆಯುವವರಿಗೆ ಸದ್ಯಕ್ಕೆ ಲಸಿಕೆ ಪಡೆಯುವ ಭಾಗ್ಯ ಇಲ್ಲವಾಗಿದೆ.

ಜಿಲ್ಲೆಗೆ ಮೇ 6ರಂದು ಕೇವಲ 1500 ಕೋವಿಶೀಲ್ಡ್ ಹಾಗೂ 500 ಕೋ ವ್ಯಾಕ್ಸಿನ್ ಮಾತ್ರ ಪೂರೈಕೆಯಾಗಿದ್ದು, ಅದನ್ನು ಆಯಾ ತಾಲೂಕಿಗಳಿಗೆ ಹಂಚಿಕೆ ಮಾಡಿ ಅವಧಿ ಮೀರಿದ ಎರಡನೇ ಡೋಸ್‌ನವರಿಗೆ ನೀಡಲಾಗುತ್ತಿದೆ. ಇಂದು ಯಾವುದೇ ಲಸಿಕೆ ಜಿಲ್ಲೆಗೆ ಆಗಮಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರು ದಿನಗಳ ಹಿಂದೆ ಜಿಲ್ಲೆಗೆ 2000 ಡೋಸ್ ಬಂದಿದ್ದು, ಇದರಲ್ಲಿ ಮತ್ತು ಇಂದು ಹಂಚಿಕೆ ಮಾಡಿದ ಲಸಿಕೆಯಲ್ಲಿ ಉಳಿದ ಸುಮಾರು 1250ರಷ್ಟು ಲಸಿಕೆಯನ್ನು ಸೋಮವಾರ ಆಯಾ ತಾಲೂಕುಗಳಿಗೆ ಹಂಚಿಕೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ರಮ ವಹಿಸಿದೆ. ಜಿಲ್ಲೆ ಯಲ್ಲಿ ಕೋವ್ಯಾಕ್ಸಿನ್‌ಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಅದರ ಉತ್ಪಾದನೆ ಕಡಿಮೆ ಇರುವುದರಿಂದ ಮೊದಲ ಡೋಸ್ ದೊರೆಯುವುದು ಕಷ್ಟಸಾಧ್ಯವಾಗಿದೆ.

ಎರಡನೇ ಡೋಸ್ ಪಡೆದು 6-8ವಾರಗಳ ಅವಧಿ ಮುಗಿದವರು ಕೋವಿ ಶೀಲ್ಡ್‌ನಲ್ಲಿ 21500 ಮತ್ತು ಕೋವ್ಯಾಕ್ಸಿನ್‌ನಲ್ಲಿ 18500 ಮಂದಿ ಇದ್ದಾರೆ. ಅವಧಿ ಮೀರಿದವರು ಕೋವಿಶೀಲ್ಡ್‌ನಲ್ಲಿ 6000 ಮತ್ತು ಕೋವ್ಯಾಕ್ಸಿನ್‌ನಲ್ಲಿ 8000 ಮಂದಿ ಇದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಹೀಗೆ ಅವಧಿ ಮುಗಿದ ಸರಿಸುಮಾರು 50,000 ಮಂದಿ ಎರಡನೇ ಡೋಸ್ ಪಡೆಯಲು ಕಾಯುತ್ತಿದ್ದಾರೆ. ಆದುದರಿಂದ ಸದ್ಯ ಮೊದಲ ಡೋಸ್ ಪಡೆಯುವವರು ಲಸಿಕಾ ಕೇಂದ್ರಗಳಿಗೆ ಆಗಮಿಸಬಾರದು ಎಂದು ಅಧಿಕಾರಿಗಳ ಮನವಿಯಾಗಿದೆ.

ಲಸಿಕೆಯ ಲಭ್ಯತೆಗಿಂತ 2 ಪಟ್ಟು ಅಧಿಕ ಜನ

ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ಸೈಂಟ್ ಸಿಸಿಲಿಸ್ ಶಾಲೆಗೆ ಸ್ಥಳಾಂತರಿಸಿ ರುವ ಲಸಿಕಾ ಕೇಂದ್ರದಲ್ಲಿ ಇಂದು ಕೂಡ ಲಸಿಕೆಯ ಲಭ್ಯತೆಗಿಂತ ಎರಡು ಪಟ್ಟು ಹೆಚ್ಚು ಜನ ಸೇರಿರುವುದು ಕಂಡುಬಂತು.

ಕಳೆದ ಎರಡು ದಿನಗಳಿಂದ ಈ ಕೇಂದ್ರದಲ್ಲಿ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ. ಇಂದು ಕೋವಿಶೀಲ್ಡ್ 150 ಹಾಗೂ ಕೋವ್ಯಾಕ್ಸಿನ್ 50 ಡೋಸ್‌ಗಳು ಮಾತ್ರ ಈ ಕೇಂದ್ರ ಪೂರೈಕೆಯಾಗಿತ್ತು. ಆದರೆ ಅಲ್ಲಿ 300-400 ಮಂದಿ ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಮೊದಲ ಡೋಸ್ ಪಡೆದು ಅವಧಿ ಮೀರಿದ ಜನರನ್ನು ಪಟ್ಟಿ ಮಾಡಿ ಟೋಕನ್ ನೀಡಲಾಯಿತು. ಲಸಿಕೆ ಸಿಗದೆ ಸಾಕಷ್ಟು ಮಂದಿ ವಾಪಾಸ್ಸು ಹೋದರು. ಬಳಿಕ ಮಧ್ಯಾಹ್ನದವರೆ ಲಸಿಕೆ ನೀಡುವ ಕಾರ್ಯ ನಡೆಯಿತು.

ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದರಿಂದ ಶಾಲೆಯ ಎದುರಿನ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವುದು ಕಂಡುಬಂತು. ಕೇಂದ್ರದಲ್ಲಿ ಪೊಲೀಸರು ಆಗಮಿಸಿ ಜನರನ್ನು ನಿಯಂತ್ರಿಸಿ, ಲಸಿಕೆ ಸಿಗದವರನ್ನು ವಾಪಾಸ್ಸು ಕಳುಹಿಸಿದರು. ಅದೇ ರೀತಿ ಕೇಂದ್ರದಲ್ಲಿ ಬೆಳಗ್ಗೆಯಿಂದ ಹಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಗಿರುವುದರಿಂದ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮೊದಲ ಡೋಸ್ ನೀಡುವುದಿಲ್ಲ ಎಂದು ತಿಳಿದಿದ್ದರೂ ಯುವ ಜನತೆ ಸೇರಿದಂತೆ ಹಲವು ಮಂದಿ ಲಸಿಕೆ ಕೇಂದ್ರಕ್ಕೆ ಮಧ್ಯಾಹ್ನದವರೆಗೆ ಆಗಮಿಸುತ್ತಿರುವುದು ಕಂಡುಬಂತು. ಇದರಿಂದ ಕೇಂದ್ರದಲ್ಲಿ ಸೋಂಕು ಹರಡುವ ಸಾಧ್ಯತೆ ಗಳಿವೆ ಎಂಬುದು ವೈದ್ಯಾಧಿಕಾರಿಗಳ ಆತಂಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News