×
Ad

ಸಾಕ್ಸ್‌ ಮಾರಿ ಜೀವಿಸುತ್ತಿದ್ದ ಲೂಧಿಯಾನದ 10ರ ಹರೆಯದ ಬಾಲಕನಿಗೆ ವೀಡಿಯೋ ಕಾಲ್‌ ಮಾಡಿ ಸಹಾಯ ಘೋಷಿಸಿದ ಪಂಜಾಬ್‌ ಸಿಎಂ

Update: 2021-05-08 18:13 IST

ಲೂಧಿಯಾನ: ತನ್ನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಲೂಧಿಯಾನಾದ ರಸ್ತೆ ಬದಿಗಳಲ್ಲಿ ಸಾಕ್ಸ್ ಮಾರುತ್ತಿರುವ 10 ವರ್ಷದ ಬಾಲಕನ ವೀಡಿಯೋ ವೈರಲ್  ಆದ ಬೆನ್ನಿಗೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಗಮನಕ್ಕೂ ಈ ವೀಡಿಯೋ ಬಂದಿದೆ. ಅವರು ತಕ್ಷಣ ಬಾಲಕನಿಗೆ ಕರೆ ಮಾಡಿದರಲ್ಲದೆ ಆತನ ಕುಟುಂಬಕ್ಕೆ ಸಹಾಯವನ್ನೂ ಘೋಷಿಸಿದ್ದಾರೆ.

ಶಾಲೆಯನ್ನು ಅರ್ಧದಲ್ಲಿಯೇ ತ್ಯಜಿಸಿ ಕುಟುಂಬಕ್ಕೆ ಆಧಾರವಾಗಲು  ತಾನು ಕೆಲಸ ಮಾಡಲು ಆರಂಭಿಸಿದೆ ಎಂದು ವಂಶ್ ಸಿಂಗ್ ಎಂಬ ಹೆಸರಿನ  ಬಾಲಕ ವೀಡಿಯೋದಲ್ಲಿ ಹೇಳುತ್ತಾನೆ. ಆತನಿಂದ ಸಾಕ್ಸ್ ಖರೀದಿಸಿ ಆತನ ವೀಡಿಯೋ ತೆಗೆದ ಗ್ರಾಹಕರೊಬ್ಬರು ಆತನಿಗೆ ರೂ. 50 ಹೆಚ್ಚುವರಿ ಹಣ ನೀಡಲು ಮುಂದೆ ಬಂದರೂ ಬಾಲಕ ನಿರಾಕರಿಸಿದ್ದಾನೆ.

ಆತನ ಜತೆ ನಂತರ ಮಾತನಾಡಿದ ಮುಖ್ಯಮಂತ್ರಿ ಆತನನ್ನು ಜಿಲ್ಲಾಡಳಿತ ಮತ್ತೆ ಶಾಲೆಗೆ ಸೇರಿಸುವುದು ಎಂದು ಹೇಳಿದ್ದಾರೆ. ಆತನ ಶಿಕ್ಷಣಕ್ಕೆ ಸಂಪೂರ್ಣ ಆರ್ಥಿಕ ಸಹಾಯ ನೀಡುವ ಭರವಸೆಯೂ ಮುಖ್ಯಮಂತ್ರಿಯಿಂದ ದೊರಕಿದೆಯಲ್ಲದೆ ಆತನ ಕುಟುಂಬಕ್ಕೆ ತಕ್ಷಣದ ಸಹಾಯವಾಗಿ ರೂ 2 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.

ಆತ ಮತ್ತೆ  ಶಾಲೆಗೆ ದಾಖಲಾಗುವಂತೆ ಸೀಎಂ ಅವರು ಲುಧಿಯಾನದ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರಲ್ಲದೆ ಆತನ ಶಿಕ್ಷಣ ವೆಚ್ಚವನ್ನು ಸರಕಾರ ಭರಿಸುವುದಾಗಿ ತಿಳಿಸಿದ್ದಾರೆ.

 ವಂಶ್ ತಂದೆ ಪರಂಜೀತ್ ಸಿಂಗ್ ಕೂಡ ಸಾಕ್ಸ್ ಮಾರಾಟಗಾರರಾಗಿದ್ದಾರೆ. ಆತನ ತಾಯಿ ರಾಣಿ ಗೃಹಿಣಿಯಾಗಿದ್ದು ಆತನಿಗೆ ಮೂವರು ಸೋದರಿಯರು ಹಾಗೂ ಒಬ್ಬ ಹಿರಿಯ ಸೋದರ ಇದ್ದಾರೆ. ಕುಟುಂಬ ನಗರದ ಹೈಬೊವಲ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News