ಕಾರ್ಕಳ ಸರಕಾರಿ ಆಸ್ಪತ್ರೆ ಬಳಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣ : ಸುನಿಲ್‌ ಕುಮಾರ್

Update: 2021-05-08 12:54 GMT

ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆ ಬಳಿ ನಿರ್ಮಾಣವಾಗಲಿರುವ ಆಕ್ಸಿಜನ್‌ ಪ್ಲಾಂಟ್‌ ಕಾಮಗಾರಿಯನ್ನು ವೇಗವಾಗಿ ಮುಗಿಸಿಕೊಡುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ನಿರ್ಮಿತಿ ಕೇಂದ್ರದವರಿಗೆ ಸೂಚಿಸಿದರು. ನಾಳೆಯೇ ಕಾಮಗಾರಿಗೆ ಚಾಲನೆ ನೀಡಿ, ಹಗಲಿರುಳು ಕಾರ್ಯನಿರ್ವಹಿಸುವಂತೆ ತಿಳಿಸಿದ ಶಾಸಕರು, 15 ದಿನದೊಳಗಡೆ ಕಾಮಗಾರಿ ಮುಗಿಸುವಂತೆಯೂ ತಾಕೀತು ಮಾಡಿದರು. 

ಶನಿವಾರ ಕಾರ್ಕಳ ಆಸ್ಪತ್ರೆಗೆ ಭೇಟಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣವಾಗಲಿರುವ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ಜಿ. ಶಂಕರ್‌ ಹಾಗೂ ದಾನಿಗಳ ನೆರವಿನಿಂದ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣವಾಗಲಿದೆ.‌ ದಿನವೊಂದಕ್ಕೆ 80 ಮಂದಿಗೆ ಇದರಿಂದ ಆಕ್ಸಿಜನ್‌ ಪೂರೈಸಬಹುದಾಗಿದೆ ಎಂದರು.

ಹೆಲ್ಪ್‌ ಡೆಸ್ಟ್‌ ಪ್ರಾರಂಭ 

ಆಸ್ಪತ್ರೆಗೆ ಆಗಮಿಸುವವರಿಗೆ ಸಮರ್ಪಕ ಮಾಹಿತಿ ನೀಡುವ ಸಲುವಾಗಿ ಹೆಲ್ಟ್‌ ಡೆಸ್ಟ್‌ ಪ್ರಾರಂಭಿಸಲಾಗಿದೆ. ಓರ್ವ ಶಿಕ್ಷಕರು, ಸ್ವಯಂ ಸೇವಕರು ಅಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕಂದಾಯ ಇಲಾಖೆಯವರೂ ಸಹಕರಿಸಲಿದ್ದು, ದಿನದ 24 ಗಂಟೆಯೂ ಈ ಸೇವೆ ಲಭ್ಯವೆಂದು ಶಾಸಕರು ತಿಳಿಸಿದರು. ಆಸ್ಪತ್ರೆಯಲ್ಲಿ 4 ಬೆಡ್‌ನ ಪ್ರಾಥಮಿಕ ಆರೈಕೆ ಕೇಂದ್ರ ಸ್ಥಾಪಿಸಿ, ಬಂದಂತರ ರೋಗಿಗಳಿಗೆ ಪ್ರಥಮ ಆರೈಕೆ ಆ ಕೇಂದ್ರದಲ್ಲಿ ನೀಡಲಾ ಗುವುದು. ಓರ್ವ ವೈದ್ಯ, ನರ್ಸ್‌ ಅಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಕೂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದರು. 

80 ಮಂದಿಗೆ ಕೋವ್ಯಾಕ್ಸಿನ್‌ 

ಶನಿವಾರ ಬೋರ್ಡ್‌ ಹೈಸ್ಕೂಲ್‌ನಲ್ಲಿ 80 ಮಂದಿಗೆ ಕೋವ್ಯಾಕ್ಸಿನ್‌ ನೀಡಲಾಗಿದೆ. ಸೆಕೆಂಡ್‌ ಡೋಸ್‌ ಲಸಿಕೆ ಪಡೆಯಲಿರುವವರಿಗೆ ಆಸ್ಪತ್ರೆ ಯಿಂದ ಕರೆ ಮಾಡಲಾಗುತ್ತಿದ್ದು, ಅಂತವರು ಕಾರ್ಕಳ  ಬೋರ್ಡ್‌ ಹೈಸ್ಕೂಲ್‌ಗೆ ಬಂದು ಲಸಿಕೆ ಪಡೆಯಬಹುದಾಗಿದೆ ಎಂದು ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಎಸ್.‌ ರಾವ್‌, ತಾ.ಪಂ. ಇಒ ಶಶಿಧರ್‌ ಜಿ.ಎಸ್‌., ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಸದಸ್ಯ ಪ್ರದೀಪ್‌, ಮಾಜಿ ಪುರಸಭಾ ಸದಸ್ಯ ಪ್ರಕಾಶ್‌ ರಾವ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ನವೀನ್‌ ನಾಯಕ್‌, ಕರುಣಾಕರ್‌ ಕೋಟ್ಯಾನ್‌, ನಿರಂಜನ್‌ ಜೈನ್‌, ಅಶೋಕ್‌ ಸುವರ್ಣ, ಆನಂದ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News