ಕೋವಿಡ್ ನಿರ್ವಹಣೆಗೆ ‘ಸಂಚಲನ’ ಸಂಸ್ಥೆಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್ ಹಸ್ತಾಂತರ

Update: 2021-05-08 14:15 GMT

ಉಡುಪಿ, ಮೇ 8: ಕಳೆದ ಏಳು ವರ್ಷಗಳಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ, ಉದ್ಯೋಗಳ ಮೇಳಗಳಂಥ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ‘ಸಂಚಲನ’ ಸ್ವಯಂ ಸೇವಾ ಸಂಘಟನೆ ಈಗ ಕೋವಿಡ್ ನಿರ್ವಹಣೆಗಾಗಿ ಉಡುಪಿ ಜಿಲ್ಲಾಡಳಿತಕ್ಕೆ ಉಚಿತ ಸೇವೆಯ ಅಂಬುಲೆನ್ಸ್‌ನ್ನು ಹಸ್ತಾಂತರಿಸಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಉಡುಪಿ ಜಿಲ್ಲೆಯ ಬಡ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಸೇವೆಯನ್ನು ನೀಡಲು ಸಹಕಾರಿಯಾಗುವ ಸುಸಜ್ಜಿತ ನೂತನ ಆಂಬುಲೆನ್ಸನ್ನು ಸಂಸ್ಥೆ ಉಡುಪಿ ಜಿಲ್ಲಾಡಳಿತದೊಂದಿಗೆ ಒಡಂಬಡಿಕೆಯ ಮೂಲಕ ಇಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖ ದಲ್ಲಿ ಹಸ್ತಾಂತರಿಸಿತು. ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಯೋಜನೆಯೂ ತಮ್ಮ ಸಂಸ್ಥೆಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಸಂಚಲನ ಸಂಸ್ಥೆಯ ಈ ಕೊಡುಗೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಇದೊಂದು ಶ್ಲಾಘನೀಯ ಕಾರ್ಯವೆಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪೌರ್ಣಮಿ ಪ್ರೇಮ್ ಶೆಟ್ಟಿ, ಸುಲೋಚನಾ ಶೆಟ್ಟಿ, ಓಂಪ್ರಸಾದ್ ಶೆಟ್ಟಿ, ವಿಜಯ್ ಡಿಸೋಜ, ಜೀವನ್ ಅಮ್ಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News