ಎಂಐಟಿಯ 2 ವಿದ್ಯಾರ್ಥಿಗಳಿಗೆ ಸ್ಟಾನ್‌ಫೋರ್ಡ್ ವಿವಿ ಸ್ಕಾಲರ್‌ಶಿಪ್

Update: 2021-05-08 14:24 GMT

ಉಡುಪಿ, ಮೇ 8: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಅಧ್ಯಯನ ಕ್ಕಾಗಿ ಅಮೆರಿಕದ ಪ್ರಸಿದ್ಧ ಸ್ಟಾನ್‌ಫೋರ್ಡ್ ವಿವಿಯ ಪ್ರತಿಷ್ಠಿತ ನೈಟ್-ಹೆನೆಸ್ಸಿ ಸ್ಕಾಲರ್‌ಶಿಪ್ ದೊರೆತಿದೆ.

ಕಂಪ್ಯೂಟರ್ ಸಾಯನ್ಸ್ ಎಂಡ್ ಇಂಜಿನಿಯರಿಂಗ್‌ನ ಅಕ್ಷತಾ ಕಾಮತ್ ಹಾಗೂ ಏರೋನಾಟಿಕಲ್ ಇಂಜಿನಿಯರಿಂಗ್‌ನ ಧ್ರುವ ಸೂರಿ ಅವರು ಸ್ಟಾನ್‌ಫೋರ್ಡ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಂದುವರಿಸಲು ನೈಟ್ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಈ ವರ್ಷದ ಕಾರ್ಯಕ್ರಮಕ್ಕಾಗಿ 26 ದೇಶಗಳ ಒಟ್ಟು 76 ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ್ದು, ಇವರಲ್ಲಿ ಭಾರತದಿಂದ ಆಯ್ಕೆಯಾದ ಇಬ್ಬರು ಇವರಾಗಿದ್ದಾರೆ.

ಬಹುವಿಷಯ ಹಾಗೂ ಬಹುಸಂಸ್ಕೃತಿಯ ಸಮುದಾಯದಿಂದ ವಿಶ್ವದಲ್ಲಿ ಮೂಡಿ ಬರುವ ಭವಿಷ್ಯದ ನಾಯಕರಿಗೆ, ಸಮಾಜ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೆ ಪರಿಹಾರವನ್ನು ಸೂಚಿಸುವ ಸಹಭಾಗಿತ್ವದ ಶೋಧನೆ ಗಾಗಿ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಉಡುಪಿಯವರಾದ ಅಕ್ಷತಾ ಕಾಮತ್ ಅವರು ಸ್ಟಾನ್‌ಫೋರ್ಡ್ ಗ್ರಾಜುವೇಟ್ ಸ್ಕೂಲ್ ಆಫ್ ಎಜ್ಯುಕೇಷನ್‌ನಲ್ಲಿ ಎಜ್ಯುಕೇಷನ್ ಡಾಟಾ ಸಾಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಅಭ್ಯಸಿಸಲಿದ್ದಾರೆ. ಅವರು ಅನಾಥ, ಬಡ ಮಕ್ಕಳೊಂದಿಗೆ ಆಸಕ್ತ ಪ್ರತಿನಿಧಿಗಳಿಗೆ ಸಂವಹನ ನಡೆಸಲು ಸಾಧ್ಯವಾಗುವಂತೆ ‘ಸಾಂತಾನೆಟ್’ ಎಂಬ ಇಂಟರ್‌ನೆಟ್ ವೇದಿಕೆಯೊಂದನ್ನು ರೂಪಿಸಿದ್ದರು. ಸ್ಟಾನ್‌ಫೋರ್ಡ್ ವಿವಿ ನಡೆಸಿದ ಸ್ಟಾನ್‌ಫೋರ್ಡ್ ಹೆಲ್ತ್++ ಹ್ಯಾಕಥಾನ್‌ನ್ನು ಸಹ ಅವರು ಗೆದ್ದುಕೊಂಡಿದ್ದರು.

ಹೊಸದಿಲ್ಲಿ ಮೂಲಕ ಧ್ರುವ ಸೂರಿ ಸ್ಟಾನ್‌ಫೋರ್ಡ್ ಸ್ಕೂಲ್ ಆಫ್ ಅರ್ಥ್, ಎನರ್ಜಿ ಎಂಡ್ ಎನ್ವರಾಮೆಂಟ್‌ನಲ್ಲಿ ಎನರ್ಜಿ ರಿಸೋರ್ಸ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲಿದ್ದಾರೆ. ಹವಾಮಾನ ಹಾಗೂ ಇಂಧನ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿ ಭಾರತ ಹಾಗೂ ಇತರ ಅಭಿವೃದ್ಧಿಶೀಲ ದೇಶಗಳಲ್ಲಿ ದುರ್ಬಲ ವರ್ಗಕ್ಕೆ ನೆರವಾಗುವ ಇರಾದೆಯನ್ನು ಅವರು ಹೊಂದಿದ್ದಾರೆ.

ಎಂಐಟಿಯ ಇಬ್ಬರು ವಿದ್ಯಾರ್ಥಿಗಳ ವಿಶೇಷ ಸಾಧನೆಯನ್ನು ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಚಾನ್ಸಲರ್ ಲೆ.ಜ.ಡಾ.ಎಂ.ಡಿ. ವೆಂಕಟೇಶ್, ಎಂಐಟಿ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News