ಕೊರೋನ ಸೋಂಕು ನಿರ್ವಹಣೆಯಲ್ಲಿ ಆಡಳಿತದ ಸಂಪೂರ್ಣ ವೈಫಲ್ಯ: ವೀರಪ್ಪ ಮೊಯ್ಲಿ ಟೀಕೆ

Update: 2021-05-08 17:53 GMT

ಹೊಸದಿಲ್ಲಿ, ಮೇ 8: ಕೊರೋನ ಸೋಂಕಿನ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಕೇಂದ್ರ ಸರಕಾರ ಎಡವಿದೆ. ಇಲ್ಲಿ ಆಡಳಿತದ ಸಂಪೂರ್ಣ ವೈಫಲ್ಯ ಮತ್ತು ರಾಷ್ಟ್ರೀಯ ಕಾರ್ಯತಂತ್ರದ ಕೊರತೆ ಎದ್ದುಕಾಣುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ. ಈಗ ದೇಶದಲ್ಲಿರುವ ಸ್ಥಿತಿಯನ್ನು ಯುದ್ಧದ ರೀತಿಯಲ್ಲಿ ಪರಿಗಣಿಸಿ ಕಾರ್ಯತಂತ್ರ ರೂಪಿಸಬೇಕಿದೆ. ಆದರೆ ರಾಜ್ಯಗಳಿಗೆ ಆಮ್ಲಜನಕ ಹಂಚಿಕೆ, ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಬೆಡ್, ಆಮ್ಲಜನಕ ಅಥವಾ ವೆಂಟಿಲೇಟರ್ ಪೂರೈಕೆಗೆ ಸೂಕ್ತ ಕಾರ್ಯನೀತಿ ರೂಪಿಸಲಾಗಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.

ಸೋಂಕಿನ ಪ್ರಥಮ ಮತ್ತು ಎರಡನೇ ಅಲೆಯ ಬಗ್ಗೆ ತಜ್ಞರು ಮುಂಚಿತವಾಗಿಯೇ ಎಚ್ಚರಿಸಿದ್ದರೂ ಇದನ್ನು ಎದುರಿಸಲು ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯಗಳು ಸಾಕಷ್ಟು ಸನ್ನದ್ಧತೆ ಮಾಡಿಕೊಳ್ಳದಿರುವುದು ಆತಂಕದ ವಿಷಯವಾಗಿದೆ. ದೇಶದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಕೇರಳ, ತಮಿಳುನಾಡು ಇತ್ಯಾದಿ ಹಲವು ರಾಜ್ಯಗಳು ಕೊರೋನದ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿವೆ. ಇನ್ನೇನು 3ನೇ ಅಲೆಯೂ ಬಾಗಿಲನ್ನು ಬಡಿಯಲಿದೆ. ಇದು ಇನ್ನಷ್ಟು ವಿನಾಶಕಾರಿ ಎಂದು ಎಚ್ಚರಿಕೆ ನೀಡಲಾಗಿದೆ. 

ದಾಸ್ತಾನು ಇರಿಸುವ ವಿಷಯ ಹಾಗಿರಲಿ, ಆಮ್ಲಜನಕದ ಪೂರೈಕೆಯಲ್ಲಿ ಈಗ ಎದುರಾಗಿರುವ ಕೊರತೆಯನ್ನು ಸರಿದೂಗಿಸಲೇ ಕೇಂದ್ರ ಸರಕಾರ ಹೆಣಗುತ್ತಿದೆ. ಈ ಹಿನ್ನೆಲೆಯಲ್ಲಿ, ಸಮರೋಪಾದಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ರಕ್ಷಣಾ ಪಡೆಗಳ ಸೇವೆಯನ್ನು ಪಡೆಯಬೇಕು. ಎಲ್ಲಾ ತೈಲ ಉತ್ಪಾದನಾ ಸಂಸ್ಥೆಗಳೂ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚುಗೊಳಿಸಬೇಕು. ಇಂತಹ ಸಂದರ್ಭದಲ್ಲಿ ಪ್ರಧಾನಿ ಮುಂಚೂಣಿಯಲ್ಲಿ ನಿಂತು ನಿರ್ದೇಶಿಸಬೇಕು. ಆದರೆ ಅವರು ಗೃಹ ಸಚಿವರೊಂದಿಗೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು ಎಂದು ಮೊಯ್ಲಿ ಟೀಕಿಸಿದರು.

ಈ ಸಂಕಷ್ಟದ ಸಂದರ್ಭದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಸರಕಾರವನ್ನು ಎಚ್ಚರಿಸಿ, ಕೆಲಸ ಮಾಡುವಂತೆ ತರಾಟೆಗೆತ್ತಿಕೊಳ್ಳುತ್ತಿರುವುದು ನಿರಾಶೆಯ ಕಾರ್ಮೋಡದ ನಡುವಿನ ಆಶಾಕಿರಣದಂತೆ ಗೋಚರಿಸಿದೆ ಎಂದವರು ಹೇಳಿದ್ದಾರೆ. ಈಗ ಜಾರಿಯಲ್ಲಿರುವ ಲಸಿಕಾ ಅಭಿಯಾನದ ವ್ಯಾಪ್ತಿಗೆ ಒಳಪಡದ ಜನರಿಗೆ ಸೂಕ್ತ ವೈದ್ಯಕೀಯ ವಿಮೆ ಒದಗಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News