ಕೊರೋನ ಸೋಂಕಿನ ಸಮಸ್ಯೆ: 4 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮಾತುಕತೆ
ಹೊಸದಿಲ್ಲಿ, ಮೇ 9: ಕೊರೋನ ಸೋಂಕಿನ 2ನೇ ಅಲೆ ದೇಶದೆಲ್ಲೆಡೆ ತೀವ್ರವಾಗಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಕರ್ನಾಟಕ, ಬಿಹಾರ, ಪಂಜಾಬ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಪರಿಸ್ಥಿತಿ ನಿಯಂತ್ರಿಸಲು ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ದೈನಂದಿನ ಸೋಂಕು ಪ್ರಕರಣ 4 ಲಕ್ಷದ ಗಡಿ ದಾಟಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉನ್ನತ ವೈದ್ಯಾಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ.
ಈ ಮಧ್ಯೆ, ಶನಿವಾರದ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ, ಶುಕ್ರವಾರಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಶನಿವಾರ 4,092 ಮಂದಿ ಮೃತಪಟ್ಟಿದ್ದರೆ ಶುಕ್ರವಾರ 4,187 ಮಂದಿ ಮೃತಪಟ್ಟಿದ್ದರು. ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 2,42,362ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ರವಿವಾರ ಹೇಳಿದೆ. ದೇಶದಲ್ಲಿ ಸಕ್ರಿಯ ಪ್ರಕರಣ 37,36,648ಕ್ಕೆ, ಒಟ್ಟು ಪ್ರಕರಣ 2,22,96,414ಕ್ಕೇರಿದೆ. ಚೇತರಿಕೆಯ ಪ್ರಮಾಣ 82.15% ಆಗಿದೆ ಎಂದು ಕೇಂದ್ರ ಆರೆಗ್ಯ ಇಲಾಖೆಯ ಅಂಕಿಅಂಶ ಹೇಳಿದೆ.