ಕೋವಿಡ್-19:ಉ.ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ಸಚಿವರಿಂದ ಆದಿತ್ಯನಾಥ್ ಗೆ ಪತ್ರ

Update: 2021-05-09 18:47 GMT

ಹೊಸದಿಲ್ಲಿ,ಮೇ 9: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರವಿವಾರ ಪತ್ರವೊಂದನ್ನು ಬರೆದಿರುವ ಕೇಂದ್ರ ಸಚಿವ ಹಾಗೂ ಬರೇಲಿಯ ಬಿಜೆಪಿ ಸಂಸದ ಸಂತೋಷ್ ಗಂಗ್ವಾರ್ ಅವರು ಕೋವಿಡ್-19 ಸಾಂಕ್ರಾಮಿಕವನ್ನು ನಿರ್ವಹಿಸಲು ರಾಜ್ಯದಲ್ಲಿಯ ಆರೋಗ್ಯ ರಕ್ಷಣೆ ವ್ಯವಸ್ಥೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನೂ ಅವರು ತನ್ನ ಪತ್ರದಲ್ಲಿ ಸೂಚಿಸಿದ್ದಾರೆ.

ಅಧಿಕಾರಿಗಳು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ರೋಗಿಗಳು ರೆಫರಲ್ ಆಸ್ಪತ್ರೆಗಳಿಗೆ ದಾಖಲಾಗಲು ಶಿಫಾರಸು ಪತ್ರಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ಪತ್ರದಲ್ಲಿ ದೂರಿರುವ ಗಂಗ್ವಾರ್,ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ನಿಭಾಯಿಸಲು ಬರೇಲಿಯಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವಂತೆ ಆದಿತ್ಯನಾಥಗೆ ಸಲಹೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಬಳಕೆಯಾಗುವ ಬೈಲೆವೆಲ್ ಪಾಸಿಟಿವ್ ಏರ್ ಪ್ರೆಷರ್ (ಬಿಐಪಿಎಪಿ) ಯಂತ್ರಗಳು,ವೆಂಟಿಲೇಟರ್ಗಳು ಮತ್ತು ಇತರ ಉಪಕರಣಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿರುವ ಅವರು,ವೈದ್ಯಕೀಯ ಉಪಕರಣಗಳ ಬೆಲೆಗಳಿಗೆ ಗರಿಷ್ಠ ಮಿತಿಯನ್ನು ವಿಧಿಸಬೇಕು ಮತ್ತು ಎಂಎಸ್ಎಂಇ ಅಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರಿಯಾಯಿತಿಗಳನ್ನು ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಹಲವಾರು ಜನರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳಲ್ಲಿ ಆಮ್ಲಜನಕ ಸಿಲಿಂಡರ್ಗಳು ಸಂಗ್ರಹಿಸಿಟ್ಟುಕೊಂಡಿರುವುದರಿಂದ ಬರೇಲಿಯಲ್ಲಿ ಆಮ್ಲಜನಕ ಕೊರತೆಯಾಗಿರುವ ಬಗ್ಗೆ ತನಗೆ ಮಾಹಿತಿ ಲಭಿಸಿದೆ. ಹೀಗಾಗಿ ಆಮ್ಲಜನಕ ಸಿಲಿಂಡರ್ಗಳು ಅಗತ್ಯವುಳ್ಳವರಿಗೆ ತಲುಪುತ್ತಿಲ್ಲ. ಇಂತಹ ವ್ಯಕ್ತಿಗಳು ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ,ಇಂತಹವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಂಗ್ವಾರ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News