ತಿರುಪತಿ: ತಬ್ಲೀಗಿ ಜಮಾಅತ್ ನಿಂದ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ

Update: 2021-05-10 16:54 GMT

ಹೊಸದಿಲ್ಲಿ, ಮೇ 10: ಕಳೆದ ವರ್ಷ ಕೊರೋನ ಸೋಂಕು ಹರಡಿದ ಆರೋಪಕ್ಕೆ ಒಳಗಾದ ತಬ್ಲೀಗಿ ಜಮಾಅತ್, ಈಗ ಆಂಧ್ರಪ್ರದೇಶದ ತಿರುಪತಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವ ಜವಾಬ್ದಾರಿ ವಹಿಸಿಕೊಂಡಿದೆ.

ಜಾತಿ, ಧರ್ಮ ಪರಿಗಣಿಸದೆ ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ಜನರಿಗೆ ನೆರವು ನೀಡಲು ಹಾಗೂ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ತಿರುಪತಿ ಯುನೈಟಡ್ ಮುಸ್ಲಿಂ ಅಸೋಸಿಯೇಶನ್ ಅಡಿಯಲ್ಲಿ ಕೋವಿಡ್-19 ಜಂಟಿ ಕ್ರಿಯಾ ಸಮಿತಿಯನ್ನು ತಬ್ಲೀಘ್ ಜಮಾಅತ್ ರೂಪಿಸಿದೆ.

‘‘ಕಳೆದ ವರ್ಷ ಕೊರೋನ ಸೋಂಕು ಹರಡಲು ನಾವು ಕಾರಣ ಎಂದು ಆರೋಪಿಸಲಾಗಿತ್ತು. ಆದರೆ, ಈಗ ನಮ್ಮ ಶ್ರಮವನ್ನು ಜನರು ಪ್ರಶಂಸಿಸುತ್ತಿದ್ದಾರೆ’’ ಎಂದು ತಬ್ಲೀಗಿ ಜಮಾಅತ್ ನ ಸಕ್ರಿಯ ಸದಸ್ಯ ಜೆಎಂಡಿ ಗೌಸ್ ಅವರು ಹೇಳಿದ್ದಾರೆ.

ಕೊರೋನದ ಎರಡನೇ ಅಲೆ ದೇಶಾದ್ಯಂತ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಕೊರೋನ ಸೋಂಕಿತರು ಹಾಸಿಗೆ, ಆಮ್ಲಜನಕ ಹಾಗೂ ಔಷಧಕ್ಕಾಗಿ ಪರದಾಡುತ್ತಿದ್ದಾರೆ. ಕೊರೋನ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗಿರುವುದರಿಂದ ದೇಶದಲ್ಲಿ ಚಿತಾಗಾರಗಳು ಮೃತದೇಹಗಳಿಂದ ತುಂಬಿ ಹೋಗಿವೆ. ಇಂತಹ ಬಿಕ್ಕಟ್ಟಿನ ಸಂದರ್ಭ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸಲು ತಬ್ಲೀಗಿ ಜಮಾಅತ್ ಮುಂದೆ ಬಂದಿದೆ.

ನಾವು ಫೋನ್ ಮೂಲಕ ಸ್ವೀಕರಿಸಲಾದ ಮನವಿ ಹಾಗೂ ಮಾಹಿತಿಯ ಆಧಾರದಲ್ಲಿ ಪ್ರತಿದಿನ 60 ಸ್ವಯಂಸೇವಕರ ಮೂಲಕ ನೆರವು ನೀಡುತ್ತಿದ್ದೇವೆ. ಕಳೆದ ಒಂದು ತಿಂಗಳಿಂದ ಪ್ರತಿದಿನ ಕನಿಷ್ಠ 15 ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ ಎಂದು ಗೌಸ್ ಹೇಳಿದ್ದಾರೆ.

‘‘ಕೊರೋನ ಸೋಂಕಿನ ಮೊದಲ ಅಲೆಯಲ್ಲಿ ಕೆಲವೇ ಸಾವು ಸಂಭವಿಸಿತ್ತು. ಆಗ ಮೃತಪಟ್ಟವರು ವಯೋವೃದ್ಧರು ಮಾತ್ರ. ಆದರೆ, ಈಗ ಯುವಜನರು ಕೂಡ ಸಾವನ್ನಪ್ಪುತ್ತಿದ್ದಾರೆ’’ ಎಂದು ಗೌಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News