ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್. ಗೌರಿ ಅಮ್ಮ ನಿಧನ

Update: 2021-05-11 06:48 GMT
photo: twitter

ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್  ನಾಯಕಿ ಕೆ.ಆರ್. ಗೌರಿ ಅಮ್ಮ(102 ವರ್ಷ)ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದಾಗಿ  ಕಳೆದ ಕೆಲವು ವಾರಗಳ ಹಿಂದೆ ಅವರನ್ನು ರಾಜ್ಯ ರಾಜಧಾನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ  ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಕೇರಳದ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದ ಗೌರಿ ಅವರನ್ನು ಜನರು ಪ್ರೀತಿಯಿಂದ 'ಗೌರಿ ಅಮ್ಮ' ಎಂದು ಕರೆಯುತ್ತಿದ್ದರು.  ಅವರು ಕೇರಳದ ಮೊದಲ ವಿಧಾನಸಭೆಯ ಸದಸ್ಯರೂ ಆಗಿದ್ದರು. ಅವರು ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮಹಿಳಾ ಸಚಿವರಾಗಿದ್ದರು. ವಿಧಾನಸಭೆಗೆ 10 ಬಾರಿ ಚುನಾಯಿತರಾದ ಅವರು ಆರು ವಿವಿಧ ಸರಕಾರಗಳ ಭಾಗವಾಗಿ 16 ವರ್ಷಗಳ ಕಾಲ ಸಚಿವೆಯಾಗಿದ್ದರು. ಕಂದಾಯ, ಅಬಕಾರಿ, ಕೈಗಾರಿಕೆಗಳು, ಆಹಾರ ಮತ್ತು ಕೃಷಿ ಸೇರಿದಂತೆ ವಿವಿಧ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು.

ಗೌರಿ ಜುಲೈ 14, 1919 ರಂದು ಅಲಪ್ಪುಳ ಜಿಲ್ಲೆಯ ಪಟ್ಟನಾಕಡ್ ಗ್ರಾಮದಲ್ಲಿ ಕೆ.ಎ. ರಾಮನ್ ಮತ್ತು ಪಾರ್ವತಿ ಅಮ್ಮನ ಏಳನೇ ಮಗಳಾಗಿ ಜನಿಸಿದರು. ಅವರು ತುರಾವೂರ್ ಮತ್ತು ಚರ್ತಾಲಾದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರೈಸಿದ್ದರು.

ಎರ್ನಾಕುಲಂ ಮಹಾರಾಜ ಕಾಲೇಜಿನಿಂದ ಪದವಿ ಮುಗಿಸಿದರು. ಅವರು ಎರ್ನಾಕುಲಂನ ಸರಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News