ಕೋವಿಡ್‌ ಕುರಿತು ಜನರಲ್ಲಿ ಕಾಂಗ್ರೆಸ್‌ ಸುಳ್ಳು ಭಯ ಸೃಷ್ಟಿಸುತ್ತಿದೆ: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

Update: 2021-05-11 11:00 GMT

ಹೊಸದಿಲ್ಲಿ : ಪ್ರಸಕ್ತ ಕೋವಿಡ್ ಸಾಂಕ್ರಾಮಿಕದ ಸಂದರ್ಭ ವಿಪಕ್ಷ ಕಾಂಗ್ರೆಸ್ "ಜನರನ್ನು ದಾರಿತಪ್ಪಿಸುತ್ತಿದೆ ಹಾಗೂ ಸುಳ್ಳು ಭಯ ಸೃಷ್ಟಿಸುತ್ತಿದೆ" ಎಂದು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಕೋವಿಡ್ ಎರಡನೇ ಅಲೆಯು  ಮೋದಿ ಸರಕಾರದ ಅಸಂವೇದಿತನ ಹಾಗೂ ಅಸಾಮರ್ಥ್ಯದ ನೇರ ಪರಿಣಾಮ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೈಗೊಂಡ ನಿರ್ಣಯದ ಬೆನ್ನಲ್ಲೇ ಸೋನಿಯಾ ಗಾಂಧಿಗೆ ನಡ್ಡಾ ಬರೆದಿರುವ ಈ ನಾಲ್ಕು ಪುಟಗಳ ಪತ್ರವನ್ನು ಹಲವು ಬಿಜೆಪಿ ನಾಯಕರುಗಳು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ.

"ನೀವು ನಿಮ್ಮನ್ನೇ ಕೇಳಿಕೊಳ್ಳಿ, ಇಂತಹ ಸಮಯದಲ್ಲಿ ನಿಮ್ಮ ಪಕ್ಷದ ವರ್ತನೆ ನಮ್ಮ ಕೋವಿಡ್ ವಾರಿಯರ್ಸ್ ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದೆಯೇ ಅಥವಾ ಅವರನ್ನು ದುರ್ಬಲಗೊಳಿಸುತ್ತಿದೆಯೇ?" ಎಂದು ತಮ್ಮ ಪತ್ರದಲ್ಲಿ ಪ್ರಶ್ನಿಸಿದ ನಡ್ಡಾ,  "ಉದ್ದೇಶಪೂರ್ವಕವಾಗಿ ಅಥವಾ ಅಲ್ಲದೇ ಇದ್ದರೂ ನಿಮ್ಮ ಕೃತ್ಯಗಳು ಕೋವಿಡ್ ವಿರುದ್ಧದ ಈ ಹೋರಾಟವನ್ನು ದುರ್ಬಲಗೊಳಿಸುತ್ತದೆ" ಎಂದು ಅವರು  ಬರೆದಿದ್ದಾರೆ.

ಕೋವಿಡ್ ಲಸಿಕೆ ತೆಗೆದುಕೊಳ್ಳಲು ಜನರು ತೋರಿಸುತ್ತಿರುವ ಹಿಂಜರಿಕೆಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಯಕರು ಕಾರಣ ಎಂದು ಆರೋಪಿಸಿದ ನಡ್ಡಾ "ಭಾರತದಲ್ಲಿ ತಯಾರಿಸಲಾದ ಲಸಿಕೆ ರಾಷ್ಟ್ರೀಯ ಹೆಮ್ಮೆಗೆ ಕಾರಣವಾಗಬೇಕು, ಆದರೆ ಕಾಂಗ್ರೆಸ್ ನಾಯಕರು ಅದನ್ನು ಅಪಹಾಸ್ಯ ಮಾಡಲು ಯತ್ನಿಸಿ ಜನರ ಮನಸ್ಸಿನಲ್ಲಿ ಸಂಶಯ ಮೂಡುವಂತೆ ಮಾಡಿದ್ದಾರೆ" ಎಂದು ಹೇಳಿದರು.

ಕೇಂದ್ರದ ಲಸಿಕಾ ನೀತಿಯನ್ನು ಖಂಡಿಸಿದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನಡ್ಡಾ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳೂ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಬೇಕೆಂದು ಹೇಳಿದರು. ಆದರೆ ಈಗಾಗಲೇ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ, ಛತ್ತೀಸಗಢ, ಪಂಜಾಬ್ ಹಾಗೂ ಜಾರ್ಖಂಡ್ ಸರಕಾರಗಳು  ಉಚಿತ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News