ಗೋವಾ ಸರಕಾರಿ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಮೃತ್ಯು

Update: 2021-05-11 18:23 GMT
ಸಾಂದರ್ಭಿಕ ಚಿತ್ರ 

ಪಣಜಿ, ಮೇ 11: ಸರಕಾರಿ ಸ್ವಾಮಿತ್ವದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಮಂಗಳವಾರ ಬೆಳಗ್ಗೆ 26 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಹೇಳಿದ್ದಾರೆ. ಈ ಸಾವಿಗೆ ಖಚಿತ ಕಾರಣ ತಿಳಿಯಲು ಹೈಕೋರ್ಟ್ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ.

ಬೆಳಗ್ಗೆ 2 ಗಂಟೆಯಿಂದ 6 ಗಂಟೆಯ ನಡುವೆ ಈ ಸಾವು ಸಂಭವಿಸಿದೆ ಎಂದ ಅವರು ಸಾವಿನ ಕಾರಣ ತಿಳಿಸುವುದರಿಂದ ನುಣುಚಿಕೊಂಡಿದ್ದಾರೆ.
 
ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವೈದ್ಯಕೀಯ ಆಮ್ಲಜನಕದ ಲಭ್ಯತೆ ಹಾಗೂ ಜಿಎಂಸಿಎಚ್ನ ಕೋವಿಡ್-19 ವಾರ್ಡ್ಗೆ ಅದರ ಪೂರೈಕೆ ನಡುವಿನ ಅಂತರ ರೋಗಿಗಳಿಗೆ ಕೆಲವು ಸಮಸ್ಯೆ ಉಂಟು ಮಾಡಿರಬಹುದು. ರಾಜ್ಯದಲ್ಲಿ ಆಮ್ಲಜನಕ ಪೂರೈಕೆಯ ಕೊರತೆ ಇಲ್ಲ ಎಂದಿದ್ದಾರೆ.

ಆದರೆ, ಪತ್ರಕರ್ತರೊಂದಿಗೆ ಮಾತನಾಡಿದ ರಾಣೆ ಅವರು, ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸೋಮವಾರದಿಂದ ವೈದ್ಯಕೀಯ ಆಮ್ಲಜನಕ ಪೂರೈಕೆಯ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.

‘‘ಈ ಸಾವಿನ ಹಿಂದಿನ ಕಾರಣವನ್ನು ಉಚ್ಚ ನ್ಯಾಯಾಲಯ ತನಿಖೆ ನಡೆಸಬೇಕು. ಜಿಎಂಸಿಎಚ್ಗೆ ಆಮ್ಲಜನಕ ಪೂರೈಕೆ ಕುರಿತು ಉಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಹಾಗೂ ಶ್ವೇತಪತ್ರ ಸಿದ್ಧಪಡಿಸಬೇಕು. ಇದು ವಿಷಯವನ್ನು ಸರಿಯಾಗಿ ಹೊಂದಿಸಲು ಸಹಾಯ ಮಾಡುತ್ತದೆ’’ ಎಂದು ಆಸ್ಪತ್ರೆಗೆ ಮುಖ್ಯಮಂತ್ರಿ ಭೇಟಿ ನೀಡಿದ ಬಳಿಕ ರಾಜ್ಯ ಆರೋಗ್ಯ ಸಚಿವರು ಹೇಳಿದ್ದಾರೆ.

ಆಸ್ಪತ್ರೆಗೆ ಸೋಮವಾರದ ವರೆಗೆ 1,200 ಜಂಬೋ ಸಿಲಿಂಡರ್ ವೈದ್ಯಕೀಯ ಆಮ್ಲಜನಕದ ಅಗತ್ಯತೆ ಇತ್ತು. ಆದರೆ ಕೇವಲ 400 ಸಿಲಿಂಡರ್ಗಳನ್ನು ಮಾತ್ರ ಪೂರೈಸಲಾಗಿತ್ತು ಎಂದು ರಾಣೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News