ಕೋವಿಡ್‌ ಭೀತಿಯಿಂದ ಬಿಜೆಪಿ ನಾಯಕನ ಮೃತದೇಹದ ಬಳಿ ಬರದ ಗ್ರಾಮಸ್ಥರು: ಟಿಎಂಸಿ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ

Update: 2021-05-11 12:33 GMT
ಸಾಂದರ್ಭಿಕ ಚಿತ್ರ

ಕೋಲ್ಕತ್ತ: ಚುನಾವಣೆಯ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ, ಕೊಲೆಗೈಯುತ್ತಿದ್ದಾರೆ ಎಂಬ ಸುದ್ದಿ ಮತ್ತು ಅಪಪ್ರಚಾರಗಳ ನಡುವೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ನಾಯಕನೋರ್ವನ ಅಂತ್ಯಕ್ರಿಯೆ ನೆರವೇರಿಸಿದ್ದು ಸುದ್ದಿಯಾಗಿದೆ. ಈ ಕುರಿತಾದಂತೆ millenniumpost.in ವರದಿ ಮಾಡಿದೆ.

ಆಂಖೋನ  ಗ್ರಾಮ ಪಂಚಾಯತ್ ವ್ಯಾಪ್ತಿಯ ಚಕ್ತಾ ಗ್ರಾಮದ ಬಿಜೆಪಿ ನಾಯಕ, 60 ವರ್ಷದ ಅನೂಪ್ ಬಂದೋಪಾಧ್ಯಾಯ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಇದೊಂದು ಕೋವಿಡ್ ಸೋಂಕಿನಿಂದುಂಟಾದ ಸಾವು ಎಂಬ ಶಂಕೆಯಿಂದ ಗ್ರಾಮಸ್ಥರ್ಯಾರೂ ಅವರ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಲು ಮುಂದೆ ಬಾರದೇ ಇದ್ದ ಸಂದರ್ಭ ಕೆಲ ಟಿಎಂಸಿ ಕಾರ್ಯಕರ್ತರು ಆ ಕುಟುಂಬಕ್ಕೆ ಸಹಾಯಹಸ್ತ ಚಾಚಿ ಅಂತ್ಯಸಂಸ್ಕಾರಕ್ಕೆ ನೆರವಾಗಿ ರಾಜಕೀಯ ವೈರತ್ವವನ್ನು ಮರೆತು ಮಾನವೀಯತೆ ಮೆರೆದಿದ್ದಾರೆ.

ಅನೂಪ್ ಅವರು ಕಳೆದ ಶುಕ್ರವಾರ ತಮ್ಮ ಮನೆಯಲ್ಲಿಯೇ ನಿಧನರಾಗಿದ್ದರು, ಆದರೆ ಅವರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆಂಬ ವದಂತಿ ಇಡೀ ಗ್ರಾಮದಲ್ಲಿ ಹರಡಿದ್ದರಿಂದ ಯಾರ ಸಹಾಯವೂ ದೊರೆಯದೆ ಅವರ ಪತ್ನಿ ರೀನಾ ರಾತ್ರಿಯಿಡೀ ತಮ್ಮ ಪತಿಯ ಮೃತದೇಹದೊಂದಿಗೆ ಮನೆಯಲ್ಲಿ ಅಳುತ್ತಾ ಕೂರುವಂತಾಗಿತ್ತು ಎಂದು ವರದಿ ತಿಳಿಸಿದೆ.

ಮರುದಿನ ಈ ವಿಚಾರ  ತಿಳಿದ ಟಿಎಂಸಿ ಕಾರ್ಯಕರ್ತರು ಕುಟುಂಬಕ್ಕೆ ನೆರವಾಗಿದ್ದು, ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News