ಸ್ಥಳದಲ್ಲೇ ನೆಲೆಸಿರುವ ಕಾರ್ಮಿಕರಿಂದ ಸೆಂಟ್ರಲ್ ವಿಸ್ತ ಕಾಮಗಾರಿ ನಿರ್ವಹಣೆ: ಕೇಂದ್ರ ಸರಕಾರ

Update: 2021-05-11 18:03 GMT

ಹೊಸದಿಲ್ಲಿ, ಮೇ 11: ಸೆಂಟ್ರಲ್ ವಿಸ್ತ ಯೋಜನೆಯ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರು ಕೆಲಸದ ಸ್ಥಳದಲ್ಲೇ ಉಳಿದುಕೊಂಡಿದ್ದು ಕೋವಿಡ್-19 ಶಿಷ್ಟಾಚಾರ ಮತ್ತು ನಿಯಮಾವಳಿಗಳನ್ನು ಪಾಲಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರ ಮಂಗಳವಾರ ದಿಲ್ಲಿ ಹೈಕೋರ್ಟ್ಗೆ ತಿಳಿಸಿದೆ.

ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ನಿಯೋಜನೆಗೊಂಡಿರುವ 400 ಕಾರ್ಮಿಕರು ದಿಲ್ಲಿಯಲ್ಲಿ ಕರ್ಫ್ಯೂ ಜಾರಿಯಾಗುವ ಮುನ್ನವೇ ಕೆಲಸದಲ್ಲಿ ತೊಡಗಿದ್ದರು. ಕೆಲಸದ ಸ್ಥಳದಲ್ಲಿಯೇ ಉಳಿದುಕೊಳ್ಳಲು ಬಯಸಿದ  250 ಕಾರ್ಮಿಕರಿಗೆ ಕೋವಿಡ್ ನಿಯಮಾವಳಿಯ ಸೂಚನೆಯಂತೆ  ವಾಸ್ತವ್ಯ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಆರೋಗ್ಯ ವಿಮೆ, ಕ್ವಾರಂಟೈನ್ ,  ಕೋವಿಡ್ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸುವ ಸೌಲಭ್ಯವನ್ನು ಗುತ್ತಿಗೆ ವಹಿಸಿಕೊಂಡವರು ವ್ಯವಸ್ಥೆ ಮಾಡಿದ್ದಾರೆ. ‌

ಕಾರ್ಮಿಕರು ಕೆಲಸದ ಸ್ಥಳದಲ್ಲಿಯೇ ಉಳಿದುಕೊಂಡಿದ್ದರೆ ನಿರ್ಮಾಣ ಕಾರ್ಯವನ್ನು ಮುಂದುವರಿಸಬಹುದು ಎಂದು ಕೋವಿಡ್ ಶಿಷ್ಟಾಚಾರಕ್ಕೆ ಸಂಬಂಧಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಕಾರ್ಮಿಕರನ್ನು ದಿನಗೂಲಿ ಆಧಾರದಲ್ಲಿ ನೆರೆಯ ಸರಾಯ್ಕಾಲೆ ಖಾನ್ ಶಿಬಿರದಿಂದ ಕರೆತರಲಾಗುತ್ತಿದೆ ಎಂಬ ವರದಿ ಸರಿಯಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ದಿಲ್ಲಿಯಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ವಿಸ್ತ ಯೋಜನೆಯ ಕಾಮಗಾರಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿದೆ. ಭಾಷಾಂತರಕಾರರಾಗಿರುವ ಅನ್ಯಾ ಮಲ್ಹೋತ್ರಾ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕ ಸೊಹೈಲ್ ಹಾಶ್ಮಿ ಅರ್ಜಿ ಸಲ್ಲಿಸಿದವರು.

ಕೊರೋನ ಸೋಂಕು ಉತ್ತುಂಗದಲ್ಲಿರುವಾಗ ಕಾರ್ಮಿಕರನ್ನು ನೆರೆಯ ಗ್ರಾಮದಿಂದ ದಿನಾ ಕರೆದೊಯ್ಯುವುದರಿಂದ ಮತ್ತು ಕೊರೋನ ನಿಯಮಾವಳಿ ಮೀರಿ ಕೆಲಸ ಮಾಡುತ್ತಿರುವುದರಿಂದ ಸೋಂಕು ಪ್ರಸರಣವಾಗುವ ಅಧಿಕ ಅಪಾಯವಿದೆ. ಆದ್ದರಿಂದ ಹೈಕೋರ್ಟ್ ಸೆಂಟ್ರಲ್ ವಿಸ್ತ ಯೋಜನೆ ಕಾಮಗಾರಿಯನ್ನು ಈ ಸಂದರ್ಭ ನಡೆಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅಲ್ಲದೆ ಸರಕಾರ ನಿಗದಿಗೊಳಿಸಿರುವ ಅಂತಿಮ ಗಡುವಿನೊಳಗೆ ಕೆಲಸ ಮುಗಿಸಬೇಕೆಂಬ ಏಕೈಕ ಕಾರಣಕ್ಕೆ ಸೆಂಟ್ರಲ್ ವಿಸ್ತ ಯೋಜನೆಯ ಕಾಮಗಾರಿಯನ್ನು ಅಗತ್ಯಸೇವೆಗಳ ವ್ಯಾಪ್ತಿಯೊಳಗೆ ತಂದಿರುವುದು ಸರಿಯೇ ? ಎಂದೂ ಅರ್ಜಿದಾರರು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ "ಅರ್ಜಿಯು ಕಾನೂನಿನ ಪ್ರಕ್ರಿಯೆಯ ನಿಂದನೆಯಾಗಿದೆ ಮತ್ತು ಯೋಜನೆಯನ್ನು ಸ್ಥಗಿತಗೊಳಿಸುವ ಮತ್ತೊಂದು ಪ್ರಯತ್ನವಾಗಿದೆ. ಯೋಜನೆಗೆ ಚಾಲನೆ ನೀಡಿದಾಗಿನಿಂದಲೇ ಒಂದಲ್ಲ ಒಂದು ಕಾರಣ ನೀಡಿ ಇಂತಹ ಪ್ರಯತ್ನ ಮುಂದುವರಿದಿದೆ. ಆದ್ದರಿಂದ ಅರ್ಜಿದಾರರಿಗೆ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಬೇಕು" ಎಂದು ವಾದಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News