2 ತಿಂಗಳಲ್ಲೇ ಪ್ರಥಮ ಬಾರಿಗೆ ದೈನಂದಿನ ಸೋಂಕು ಪ್ರಕರಣದಲ್ಲಿ ಇಳಿಮುಖ: ಕೇಂದ್ರ ಸರಕಾರ

Update: 2021-05-11 18:06 GMT

ಹೊಸದಿಲ್ಲಿ, ಮೇ 11: ದೇಶದಲ್ಲಿ 61 ದಿನಗಳ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಕೊರೋನ ಸೋಂಕಿನ ಪ್ರಕರಣ 30,016ಕ್ಕೆ ಇಳಿದಿದ್ದು , ಇದೇ ಅವಧಿಯಲ್ಲಿ ಚೇತರಿಕೆಯ ಪ್ರಮಾಣವೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.

ಮಂಗಳವಾರ ಬೆಳಗ್ಗಿನವರೆಗಿನ ಅಂಕಿಅಂಶದಂತೆ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣ 37,15,221ಕ್ಕೆ ಇಳಿದಿದೆ. ಇದು ಒಟ್ಟು ಸೋಂಕು ಪ್ರಕರಣದ 16.16% ಆಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 82.62% ಪ್ರಕರಣ  ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ, ಆಂಧ್ರಪ್ರದೇಶ, ಗುಜರಾತ್, ಛತ್ತೀಸ್ಗಢ, ಹರ್ಯಾನ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿವೆ.

ಇದರಲ್ಲಿ 24.44% ಸಕ್ರಿಯ ಪ್ರಕರಣ ದೇಶದ 10 ಜಿಲ್ಲೆಗಳಲ್ಲಿ ದಾಖಲಾಗಿದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರ, ಪುಣೆ, ದಿಲ್ಲಿ, ಎರ್ನಾಕುಳಂ, ನಾಗಪುರ, ಅಹ್ಮದಾಬಾದ್, ತ್ರಿಶ್ಶೂರ್, ಜೈಪುರ, ಕೋಝಿಕೋಡ್ ಮತ್ತು ಮುಂಬೈ ಸೇರಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ 69.88% ಪ್ರಮಾಣ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರಪ್ರದೇಶ, ಪ.ಬಂಗಾಳ, ರಾಜಸ್ತಾನ, ಆಂಧ್ರಪ್ರದೇಶ, ಹರ್ಯಾನ ಮತ್ತು ದಿಲ್ಲಿಯಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 39,305 ಹೊಸ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 37,236, ತಮಿಳುನಾಡಿನಲ್ಲಿ 28,978 ಪ್ರಕರಣ ದಾಖಲಾಗಿದೆ.

ಇದೇ ಅವಧಿಯಲ್ಲಿ 3,56,082 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆಯ ಪ್ರಮಾಣ 1,90,27,304 ಕ್ಕೇರಿದೆ. ಕೊರೋನದಿಂದ ಮರಣವಪ್ಪುವ ರಾಷ್ಟ್ರೀಯ ಪ್ರಮಾಣ 1.09% ಆಗಿದ್ದು ಕಳೆದ 24 ಗಂಟೆಯಲ್ಲಿ 3,876 ಸಾವಿನ ಪ್ರಕರಣ ದಾಖಲಾಗಿದೆ. ಇದರಲ್ಲಿ 73.09% ಸಾವಿನ ಪ್ರಕರಣ 10 ರಾಜ್ಯಗಳಲ್ಲಿ ವರದಿಯಾಗಿದೆ .ಕರ್ನಾಟಕದಲ್ಲಿ ಅತ್ಯಧಿಕ (596), ಮಹಾರಾಷ್ಟ್ರದಲ್ಲಿ 549 ಸಾವು ಸಂಭವಿಸಿದೆ. ಇದುವರೆಗೆ 17,27,10,066 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News