ಉತ್ತರ ಪ್ರದೇಶ: ಓರ್ವ ಮಗನ ಅಂತ್ಯಸಂಸ್ಕಾರ ಮುಗಿಸಿ ಮರಳುವ ವೇಳೆ ಇನ್ನೋರ್ವ ಪುತ್ರ ಮೃತ್ಯು !

Update: 2021-05-12 08:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತವು ಕೋವಿಡ್ -19 ರ ಎರಡನೇ ಅಲೆಯ ವಿರುದ್ದ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಹೃದಯ ಕಲಕುವ ಕಥೆಗಳು ಕೇಳಿ ಬರುತ್ತಿವೆ. ಇದೀಗ ಮಾರಣಾಂತಿಕ ಕಾಯಿಲೆಯು ಗ್ರಾಮೀಣ ಪ್ರದೇಶಗಳಲ್ಲಿ ಹರಡಿಕೊಂಡಿದ್ದು, ಗ್ರೇಟರ್ ನೋಯ್ಡಾ ಪಶ್ಚಿಮದ ಜಲಾಲ್ಪುರ ಗ್ರಾಮ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 

ಕೊರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ  ತನ್ನ ಇಬ್ಬರು ಗಂಡುಮಕ್ಕಳನ್ನು ಒಂದೇ  ದಿನದಲ್ಲಿ ಕಳೆದುಕೊಂಡಿರುವ  ಅಟಾರ್ ಸಿಂಗ್ ಅವರಿಗೆ ಪ್ರಪಂಚವೇ ತಲೆ ಕೆಳಗಾಗಿರುವ ಅನುಭವವಾಗಿದೆ. 

ಮಗ ಪಂಕಜ್ ನನ್ನು ಕಳೆದುಕೊಂಡು ಕಂಗಲಾಗಿದ್ದ ಅಟಾರ್ ಸಿಂಗ್, ಮಗನ ಅಂತಿಮ ವಿಧಿ ಮುಗಿಸಿ ಬಂದ ಬೆನ್ನಿಗೇ ಇನ್ನೊಬ್ಬ ಮಗ ದೀಪಕ್ ಕೂಡ  ತೀರಿಕೊಂಡಿದ್ದಾನೆ  ಎಂಬ ಸುದ್ದಿಯು ಅವರನ್ನು ಮತ್ತಷ್ಟು ಕುಗ್ಗಿಸಿದೆ.

24 ಗಂಟೆಗಳ ಅವಧಿಯಲ್ಲಿ ಇಬ್ಬರು ಪುತ್ರರನ್ನು ಕಳೆದುಕೊಂಡಿರುವ ಅಟಾರ್ ಸಿಂಗ್ ದಂಪತಿ ತಮ್ಮ ಇಬ್ಬರು ಗಂಡುಮಕ್ಕಳ ಅಂತ್ಯಸಂಸ್ಕಾರ ಮಾಡಬೇಕಾಯಿತು. ಈ ಘಟನೆಯಿಂದ ಆಘಾತಗೊಂಡ ಸಿಂಗ್‌ ಪತ್ನಿಯು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಇಬ್ಬರು ಯುವಕರಿಗೆ ಕೊರೋನ ಸೋಂಕು ತಗಲಿತ್ತೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಇಬ್ಬರು ಯುವಕರೂ ಜ್ವರದಿಂದ ಬಳಲುತ್ತಿದ್ದರು ಮತ್ತು ಅವರ ಆಕ್ಸಿಜನ್‌ ಮಟ್ಟದಲ್ಲಿ ವಿಪರೀತ ಇಳಿಕೆ ಕಂಡು ಬಂದಿತ್ತು ಎಂದು ತಿಳಿದು ಬಂದಿದೆ.

ಕಳೆದ ಕೆಲವು ದಿನಗಳಲ್ಲಿ ಆರು ಮಹಿಳೆಯರು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಗ್ರೇಟರ್ ನೋಯ್ಡಾ ಪಶ್ಚಿಮ ಗ್ರಾಮಸ್ಥರು ತಿಳಿಸಿದ್ದಾರೆ. ಎಪ್ರಿಲ್ 28 ರಂದು ಗ್ರಾಮದಲ್ಲಿ ಮೊದಲ ಸಾವು ವರದಿಯಾಗಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News