ಸುಪ್ರೀಂಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಡಿ.ವೈ.ಚಂದ್ರಚೂಡ್ ಅವರಿಗೆ ಕೊರೋನ ಪಾಸಿಟಿವ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಡಿ.ವೈ.ಚಂದ್ರಚೂಡ್ ಅವರಿಗೆ ಕೋವಿಡ್ -19 ಗೆ ಸೋಂಕು ದೃಢಪಟ್ಟಿದೆ. ಓರ್ವ ಸಿಬ್ಬಂದಿಗೂ ಕೂಡ ಕೊರೋನ ವೈರಸ್ ಬಾಧಿಸಿದೆ.
ನ್ಯಾಯಾಧೀಶರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದರೂ, ನ್ಯಾಯಾಧೀಶರ ನೇತೃತ್ವದ ಪೀಠವು ಮುಂಬರುವ ಕೆಲವು ದಿನಗಳವರೆಗೆ ಒಟ್ಟುಗೂಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ, ವಿಚಾರಣೆಯನ್ನು ಬೇರೊಂದು ದಿನಾಂಕಕ್ಕೆ ಮುಂದೂಡುವ ಸಾಧ್ಯತೆಯಿದೆ.
ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣವನ್ನು ಆಲಿಸಲು ಕುಳಿತರು ಆದರೆ ತಾಂತ್ರಿಕ ದೋಷಗಳಿಂದಾಗಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.
ಜಸ್ಟಿಸ್ ಡಿ.ವೈ. ಚಂದ್ರಚೂಡ್ ಹಾಗೂ ಜಸ್ಟಿಸ್ ಎಂ.ಆರ್. ಶಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಶನಿವಾರ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವೈಜ್ಞಾನಿಕವಾಗಿ ವೈದ್ಯಕೀಯ ಆಕ್ಸಿಜನ್ ಹಂಚಿಕೆಗಾಗಿ 12 ಸದಸ್ಯರುಗಳನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿತ್ತು.